ಬೆಳಗಾವಿ ಮಕ್ಕಳ ಮಾರಾಟದಲ್ಲಿ ರಕ್ಷಣೆಯಾಗಿದ್ದ ಮಗು ಸಾವು

ಬೆಳಗಾವಿ, ಜೂನ್​ 22: ಮಕ್ಕಳ ಮಾರಾಟ ಜಾಲದಿಂದ ರಕ್ಷಿಸಲಾಗಿದ್ದ 30 ದಿನದ ಹೆಣ್ಣು ಮಗು ತಡರಾತ್ರಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದೆ. ಮಕ್ಕಳ ಮಾರಾಟ ಜಾಲದ ಕಿಂಗ್​ಪಿನ್​ ಆರೋಪಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ 30 ದಿನದ ಹೆಣ್ಣು ಮಗುವನ್ನು ಕೇವಲ 60 ಸಾವಿರ ರೂ.ಗೆ ನರ್ಸ್​ ಮಹಾದೇವಿ ಎಂಬುವರಿಗೆ ಮಾರಾಟ ಮಾಡಿದ್ದನು.

ನರ್ಸ್​ ಮಹಾದೇವಿ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದನ್ನು ತಿಳಿದಿದ್ದ ಮಕ್ಕಳ ರಕ್ಷಣಾ ಘಟಕದವರು ಈಕೆಯನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಲು ಬಲೆ ಹೆಣದಿದ್ದರು. ಅದರಂತೆ, ಮಕ್ಕಳ ರಕ್ಷಣಾ ಘಟಕದವರು ಮಗುವನ್ನು ಕೊಂಡುಕೊಳ್ಳಲು ಈಕೆಯನ್ನು ಸಂಪರ್ಕಿಸಿದ್ದಾರೆ. ಆಗ, ನರ್ಸ್​ ಮಹಾದೇವಿ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾಳೆ. ಅದರಂತೆ, ನರ್ಸ್ ಮಹಾದೇವಿ ಚಿಕ್ಕೋಡಿಯಿಂದ ಬೆಳಗಾವಿಗೆ ಬಂದು, ನಾನೆ ಮಗುವಿನ ತಾಯಿ ಎಂದು 1.40 ಲಕ್ಷ ಮಾರಾಟ ಮಾಡುತ್ತಿದ್ದ ವೇಳೆ ಮಕ್ಕಳ ರಕ್ಷಣಾ ಘಟಕದವರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಮಗುವನ್ನು ರಕ್ಷಿಸಿದ್ದಾರೆ.

ರಕ್ಷಿಸಿದ್ದ ಮಗುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡಲಾಗ್ತಿತ್ತು. ಬೆಳವಣಿಗೆ ಕುಂಠಿತ, ತೂಕ ಹೆಚ್ಚಳವಾಗದೆ ಅನಾರೋಗ್ಯದಿಂದ ಮಗು ತಡರಾತ್ರಿ ಮೃತಪಟ್ಟಿದೆ. ಪೊಲೀಸರು, ಮಗುವಿನ ತಂದೆ, ತಾಯಿ ಸಮ್ಮುಖದಲ್ಲಿ ಬೆಳಗಾವಿಯ ಸದಾಶಿವನಗರದ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.

ಮದುವೆಗೂ ಮುನ್ನ ದೈಹಿಕ‌ ಸಂಪರ್ಕ ಹೊಂದಿದ್ದರಿಂದ ಮಗು ಜನಿಸಿತ್ತು. ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ 20 ಸಾವಿರ ಪಡೆದು ಆಪರೇಷನ್​ ಮಾಡಿ ಏಳು ತಿಂಗಳ ಹಸುಳೆಯನ್ನು ಹೊರ ತೆಗೆದಿದ್ದನು. ಬಳಿಕ ನರ್ಸ್​ ಮಹಾದೇವಿಗೆ ಮಾರಾಟ ಮಾಡಿದ್ದನು. ನಕಲಿ ವೈದ್ಯನ ಹಣದಾಹಕ್ಕೆ ನಾಲ್ಕು ಹಸುಳೆಗಳು ಮೃತಪಟ್ಟಿವೆ. ಇತ್ತೀಚಗಷ್ಟೇ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಫಾರ್ಮ್ ಹೌಸ್​ನಲ್ಲಿ ಮೂರು ಹತ್ಯೆಯಾದ ಭ್ರೂಣ ಪತ್ತೆಯಾಗಿದ್ದವು. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.