ನಿನ್ನೆ ಕಾರು ಖರೀದಿ ಇಂದು ಅಪಘಾತ ;ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲಿ ಕಾರು ಪಲ್ಟಿ

ಅಂಕೋಲಾ, ಜೂ.22 : ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸಲು ಬಂದವರಿಗೆ ಅದೃಷ್ಟ ಕೈಕೊಟ್ಟು ಅಪಘಾತ ಸಂಭವಿಸಿದ ಪರಿಣಾಮ ಆಸ್ಪತ್ರೆ ಸೇರುವಂತಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಶೆಟಗಿರಿ ಕ್ರಾಸ್ ಮತ್ತು ಬೊಳೆ ನಡುವಿನಲ್ಲಿ ಶನಿವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ನಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮಕ್ಕಳು, ಮಹಿಳೆಯರು ಸೇರಿದಂತೆ ಎಂಟು ಜನ ಗಾಯಗೊಂಡಿದ್ದಾರೆ. ಈರ್ವರ ಸ್ಥಿತಿ ಗಂಭೀರವಾಗಿದೆ.

ತೆಲಂಗಾಣದ ಹೈದರಾಬಾದ್ ಮೂಲದ ಕುಟುಂಬವೊಂದು ನಿನ್ನೆ ಹೈದರಾಬಾದ್ ನಲ್ಲಿ ಕಾರು ಖರೀದಿಸಿ ಕುಟುಂಬ ಸಮೇತ ಮುರುಡೇಶ್ವರಕ್ಕೆ ಪ್ರಯಾಣ ಬೆಳೆಸಿತ್ತು. ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿ ಕುಟುಂಬದೊಂದಿಗೆ ದೇವರ ದರ್ಶನ ಮಾಡುವ ಉದ್ದೇಶದಿಂದ ಬಂದಿದ್ದರು. ಬಾಳೆಗುಳಿ ಕ್ರಾಸ್ ನಿಂದ ಜಿಸಿ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಮೂಲಕ ಕುಮಟಾ ಕಡೆ ತೆರಳುತ್ತಿದ್ದರು.
ಈ ವೇಳೆ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದು ಕಾರಿನ ಚಾಲಕ ಬ್ರೇಕ್ ಹಾಕಲು ಯತ್ನಿಸಿದಾಗ ಬ್ರೇಕ್ ಫೇಲಾಗಿದ್ದರಿಂದ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಕಾರಿನಲ್ಲಿದ್ದ ಇನ್ನೋರ್ವ ಯುವಕ ತಿಳಿಸಿದ್ದಾನೆ. ಆದರೆ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲಕ ಕಾರು ಚಲಾವಣೆ ಮಾಡಿದ ಪರಿಣಾಮ ನಿಯಂತ್ರಣ ಸಾಧ್ಯವಾಗದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಬುಡ ಸಮೇತ ಉರುಳಿ ಬಿದ್ದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಬಲ ಭಾಗದ ರಸ್ತೆಯಲ್ಲಿ ಪಲ್ಟಿ ಆಗಿದ್ದು ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ. ಘಟನೆಯಲ್ಲಿ ಹೊಸ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಒಂದು ಗಂಟೆಗಳ ಕಾಲ ರಸ್ತೆಯಲ್ಲಿದ್ದ ಕಾರನ್ನು ಐ ಆರ್ ಬಿ ಸಿಬ್ಬಂದಿ ಕ್ರೇನ್ ಮೂಲಕ ತೆರವುಗೊಳಿಸಿದರು. ಪಿಎಸ್ಐ ಉದ್ದಪ್ಪ ಧರೆಪ್ಪನವರ್, ಎ ಎಸೈ ನಿತ್ಯಾನಂದ ಆರ್ ಕೆ, 112 ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.