ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹತ್ಯೆ, ಕಂಬನಿ ಮಿಡಿದ ಅನಿಲ್ ಕುಂಬ್ಳೆ

ಬೆಂಗಳೂರು, (ಜೂನ್ 20): ಭಾರತ ತಂಡದ ಮಾಜಿ ಕ್ರಿಕೆಟರ್ ಡೇವಿಡ್ ಜಾನ್ಸನ್​(52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಜೂನ್ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೇವಿಡ್ ಜಾನ್ಸನ್ ಅವರು ಅನಾರೋಗ್ಯ ನಿಮಿತ್ತ ಖಿನ್ನತೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 1996ರಲ್ಲಿ ಭಾರತ​ ತಂಡದ ಪರ ಟೆಸ್ಟ್​ ಪಂದ್ಯ ಆಡಿದ್ದ ಡೇವಿಡ್ ಜಾನ್ಸನ್. ಕೆಪಿಎಲ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು.

ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಘಟನೆಯ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇನ್ನು ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟ್ ವಲಯದಿಂದ ಸಂತಾಪಗಳು ವ್ಯಕ್ತವಾಗಿವೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ್ದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು.

1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಡೇವಿಡ್ ಜಾನ್ಸನ್‌ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ ಒಟ್ಟು 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಬ್ಯಾಟರ್ ಆಗಿದ್ದ ಜಾನ್ಸನ್ 437 ರನ್ ಪೇರಿಸಿದ್ದರು.