ರಾಯಚೂರು, ಜೂನ್ 20: ಪ್ರಸಿದ್ಧ ಯಾತ್ರಾ ಸ್ಥಳ ಮಂತ್ರಾಲಯದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಿರ್ಮಾಣಗೊಂಡಿರುವ ಅತಿಥಿ ಗೃಹ ‘ಕರ್ನಾಟಕ ಭವನ’ ಉದ್ಘಾಟನೆಯಾದ ಎರಡೇ ವರ್ಷಗಳಲ್ಲಿ ಸೋರಲು ಆರಂಭವಾಗಿದೆ. ಮಳೆಯಾದ ಬೆನ್ನಲ್ಲೇ ಕರ್ನಾಟಕ ಭವನದ ಹೊಸ ಕಟ್ಟಡದಲ್ಲಿ ನೀರು ಸೋರಲು ಆರಂಭವಾಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬುದು ಗೊತ್ತಾಗಿದೆ.
ಮಂತ್ರಾಲಯದ ‘ಕರ್ನಾಟಕ ಭವನ’ದಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್ ಬೆಳಕು ಚೆಲ್ಲಿದ ಬೆನ್ನಲ್ಲೇ ಇದೀಗ ಆ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮುಜರಾಯಿ ಇಲಾಖೆ ಆದೇಶಿಸಿದೆ.
ಹೇಗಿದೆ ಕರ್ನಾಟಕ ಭವನದ ಸ್ಥಿತಿ?
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಭವನದ ಕಟ್ಟಡ ಸೋರುತ್ತಿರುವುದು ಮಾತ್ರವಲ್ಲ, ಭಕ್ತರಿಗೆ ನೆಮ್ಮದಿಯಿಂದ ತಂಗಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಇಲ್ಲಿ ಜೀವ ಭಯದಲ್ಲೇ ಭಕ್ತರು ತಂಗಬೇಕಾದ ಸ್ಥಿತಿ ಇದೆ. ಗೋಡೆಗಳು ಎಲ್ಲೆಂದರದಲ್ಲಿ ಬಿರುಕುಬಿಟ್ಟಿವೆ. ಬೇಕಾಬಿಟ್ಟಿ ಅಳವಡಿ ಮಾಡಿದ ಕಾರಣ ಗೀಸರ್, ಪ್ಲಗ್ಗಳು ಕಿತ್ತುಹೋಗಿವೆ. ಇದರಿಂದ ಕೊಠಡಿಗಳಲ್ಲಿ ತಂಗಿರುವ ಭಕ್ತರಿಗೆ ಕರೆಂಟ್ ಶಾಕ್ ಭೀತಿಯೂ ಎದುರಾಗುತ್ತಿದೆ.
ಸಣ್ಣ ಮಳೆಯಾದರೂ ಕೆಲವು ಕೊಠಡಿಗಳಲ್ಲಿ ನೀರು ಸೋರುತ್ತಿದೆ. ಕೆಲವು ಕೊಠಡಿಗಳಲ್ಲಿ ಹೆಸರಿಗೆ ಮಾತ್ರ ಎಸಿ ಅಳವಡಿಸಲಾಗಿದೆ. ಈಗಾಗಲೇ ಕಟ್ಟಡದ ಮೇಲ್ಭಾಗದಲ್ಲಿ ವಿದ್ಯುತ್ ಬಲ್ಬ್ಗಳು ಕಿತ್ತು ಹೋಗಿವೆ. ಕಟ್ಟಡದ ಮುಂಭಾಗದ ಗೋಡೆಯೇ ಸಂಪೂರ್ಣವಾಗಿ ಬಿರುಕುಬಿಟ್ಟಿದೆ.
ಕರ್ನಾಟಕದಿಂದ ಮಂತ್ರಾಲಯಕ್ಕೆ ಯಾತ್ರೆ ಕೈಗೊಳ್ಳುವ ಭಕ್ತರಿಗಾಗಿ ಅನುಕೂಲವಾಗುವಂತೆ 100 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಲು 2010ರಲ್ಲಿ 5 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಈ ವೆಚ್ಚದಲ್ಲಿ 2019ರಲ್ಲಿ 100 ಕೊಠಡಿಗಳ ಕರ್ನಾಟಕ ಭವನ (ಛತ್ರ) ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು.