ಬೆಂಗಳೂರು, ಜೂನ್.20: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಜ್ಯದ ಅನೇಕ ಗ್ರಾಮೀಣ ಭಾಗಗಳಿಂದ ವಿದ್ಯಾರ್ಥಿಗಳು ಓದುವುದಕ್ಕೆ ಬರುತ್ತಾರೆ. ಬಂದವರು ವಿದ್ಯಾಭ್ಯಾಸದಲ್ಲೇನೋ ಮುಂದೆ ಇರ್ತಾರೆ, ಆದರೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ, ಭಾಷೆಯ ಸಮಸ್ಯೆ ಎದುರಾಗುತ್ತೆ. ಈಗಂತೂ ಎಲ್ಲಾ ಕ್ಷೇತ್ರದಲ್ಲಿ ಇಂಗ್ಲಿಷ್ ಅಂತೂ ಬೇಕೇ ಬೇಕು. ಹೀಗಿರುವಾಗ ಕಮ್ಯುನಿಕೇಷನ್ ಸಮಸ್ಯೆಯಿಂದ ಕೆಲಸದಿಂದ ಅದೆಷ್ಟೋ ಜನರು ವಂಚಿತರಾಗ್ತಾರೆ. ಹೀಗಾಗಿಯೇ ಇಂತಹ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಬಹಳ ಸುಲಭವಾಗಿ ಮಾತನಾಡುವಂತೆ ಸ್ಪೆಷಲ್ ಟ್ರೈನಿಂಗ್ ಲ್ಯಾಬ್ ಶುರು ಮಾಡಲಾಗಿದೆ.
ವಿವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಂಗ್ವೇಜ್ ಲ್ಯಾಬ್ ಶುರು ಮಾಡಿ ಭಾಷಾ ಶಾಸ್ತ್ರ ಹೇಳಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಲಕ್ಷಾಂತರ ಹುದ್ದೆಗಳಿವೆ. ಐಟಿ ಬಿಟಿ ಸೇರಿದಂತೆ ನಾನಾ ಕಂಪನಿಗಳಲ್ಲಿ ಸಾಕಷ್ಟು ಅವಕಾಶಗಳಿದ್ರೂ ಉತ್ತರಭಾರತದವರಿಗೆ ಸಿಕ್ಕಷ್ಟು ಅವಕಾಶಗಳು ಬೆಂಗಳೂರಿನ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಹೊಸ ಕೌಶಲ್ಯದ ಮೊರೆ ಹೋಗಿದೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ಶುರುಮಾಡಿದೆ.
ಹೈಟೆಕ್ ತಂತ್ರಜ್ಞಾನದ ಸಹಾಯದೊಂದಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ಶುರು ಮಾಡಿದ್ದು ಭಾಷಾ ಶಾಸ್ತ್ರದ ಕೋರ್ಸ್ ಹೇಳಿ ಕೊಡಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಶಾಸ್ತ್ರ ಹೇಳಿಕೊಡುವ ಮೂಲಕ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಮಾಡಿ ಉತ್ತಮ ಕೆಲಸ ಸಿಗುವ ಕಡೆ ಕಾರ್ಯ ನಿರ್ವಹಿಸಲು ವಿವಿ ಮುಂದಾಗಿದೆ.
ಈ ಕೌಶಲ್ಯ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್‌ನಿಂದಲೂ ಹೇಳಿಕೊಡಲಾಗುವುದು. ಬೇರೆಯವರೊಂದಿಗೆ ಹೇಗೆ ಇಂಗ್ಲಿಷ್ ನಲ್ಲಿ ಮಾತನಾಡಬೇಕು. ಇಂಟರ್‌ವ್ಯೂಗಳಲ್ಲಿ ಹೇಗೆ ಉತ್ತರಿಸಬೇಕು. ಹೀಗೆ ಹಲವಾರು ವಿಚಾರಗಳ ಬಗ್ಗೆ ಕಲಿಸಿಕೊಡಲಾಗುವುದು. 4 ಬ್ಯಾಚ್‌ನಲ್ಲಿ ತಲಾ 30 ವಿದ್ಯಾರ್ಥಿಗಳಿಗೆ ಇಲ್ಲಿ ಕ್ಲಾಸ್ ನಡೆಸಲಾಗುತ್ತದೆ. ಈ ಕೋರ್ಸ್ ಮುಗಿದ ಬಳಿಕ, ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸರ್ಟಿಫಿಕೇಟ್ ಕೂಡಾ ನೀಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯನ್ನ ಉತ್ತಮ ಪಡಿಸಲು ವಿವಿ ಹೊಸ ಪ್ರಯತ್ನ ಮಾಡುತ್ತಿದೆ.
ಇನ್ನು ಈ ಇಂಗ್ಲಿಷ್ ಲ್ಯಾಬ್‌ನಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಭಾಷಾ ಸ್ಕಿಲ್‌ನ್ನ ಉತ್ತಮವಾಗಿಸಿಕೊಳ್ಳುವ ಮೂಲಕ, ವಿವಿಯ ಈ ಯೋಜನೆಯ ಸದುಪಯೋಗ ಪಡೆದುಕೊಳ್ತಿದ್ದಾರೆ.