ಕೊಪ್ಪಳದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ, ಆತಂಕದಲ್ಲಿ ಮಹಿಳೆಯರು

ಕೊಪ್ಪಳ, ಜೂನ್.19: ಕೊಪ್ಪಳ ನಗರದಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಮಹಿಳೆಯರಲ್ಲಿ ಆತಂಕವನ್ನುಂಟು ಮಾಡಿವೆ. ಇಂದು ಕೂಡಾ ಮನೆ ಮುಂದೆ ನಿಂತಿದ್ದ ಮಹಿಳೆಯ ಕತ್ತಲ್ಲಿದ್ದ ಚಿನ್ನದ ಮಾಂಗಲ್ಯ ಸರಗಳ್ಳತನವಾಗಿರೋ ಘಟನೆ ನಡೆದಿದೆ.

ಕೊಪ್ಪಳ ನಗರದ ಟೀಚರ್ಸ್ ಕಾಲೋನಿಯಲ್ಲಿ ಮುಂಜಾನೆ ಸರಗಳ್ಳತನ ನಡೆದಿದೆ. ಮಂಜುಳಾ ಹಿರೇಮಠ ಅನ್ನೋರ ಐವತ್ತು ಗ್ರಾಮ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಒಂಟಿ ಮಹಿಳೆಯರೇ ಟಾರ್ಗೇಟ್

ಇನ್ನು ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್ ಮಾಡೋರು, ಒಂಟಿಯಾಗಿ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ದೆಯರನ್ನೇ ಟಾರ್ಗೆಟ್ ಮಾಡ್ತಿರೋ ಸರಗಳ್ಳರು, ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ. ಬೈಕ್ ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬರೋ ಕಿಲಾಡಿಗಳು ಸರಗಳ್ಳತನ ಮಾಡಿ ಹೋಗುತ್ತಿದ್ದಾರೆ.

ಕೊಪ್ಪಳ ನಗರದಲ್ಲಿ ಈ ಹಿಂದೆ ಡಾಲರ್ಸ್ ಕಾಲೋನಿ ಸೇರಿದಂತೆ ಹಲವೆಡೆ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಇದು ನಗರದ ಮಹಿಳೆಯರ ಆತಂಕವನ್ನು ಹೆಚ್ಚಿಸುತ್ತಿದೆ. ಇನ್ನು ಇಂದು ನಡೆದ ಘಟನೆ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ನಗರ ಠಾಣೆ ಪಿಐ ಜಯಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗನೆ ಸರಗಳ್ಳರ ಹೆಡೆಮುರಿ ಕಟ್ಟೋದಾಗಿ ಹೇಳಿದ್ದಾರೆ.