ಕೊಪ್ಪಳ ಮೇ. 29 : ಒಂದೇ ಮನೆಯಲ್ಲಿ ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದರು. ಶವ ನೋಡಿದವರು ಆತ್ಮಹತ್ಯೆ ಎಂದೇ ಹೇಳಿದ್ದರು. ಮೇಲ್ನೋಟಕ್ಕೆ ಮೂವರ ಸಾವು ಕೂಡಾ ಆತ್ಮಹತ್ಯೆ ರೀತಿಯೇ ಇತ್ತು. ಆದರೆ ಪೊಲೀಸರು ತನಿಖೆ ನಡೆಸಿದಾಗ ಮೂವರದ್ದು ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ದೃಢಪಟ್ಟಿದೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಮಂಗಳವಾರ ಮೂವರು ಶವವಾಗಿ ಪತ್ತೆಯಾಗಿದ್ದರು. ರಾಜೇಶ್ವರಿ (50), ರಾಜೇಶ್ವರಿ ಪುತ್ರಿ ವಸಂತಾ(28) ವಸಂತಾಳ ಮಗಳ ಸಾಯಿ ಧರ್ಮತೇಜ್(5) ಅವರ ಶವ ಬಾಡಿಗೆ ಮನೆಯಲ್ಲಿ ಪತ್ತೆಯಾಗಿತ್ತು.
ಸೋಮವಾರ ಸಮೀಪದ ನಿವಾಸಿಗಳ ಜೊತೆ ಮಾತನಾಡಿದ್ದ ಮೂವರು ಸಂಜೆ ನಂತರ ಯಾರಿಗೂ ಕಣಿಸಿರಲಿಲ್ಲ. ಮಂಗಳವಾರ ಮುಂಜಾನೆ ಮನೆ ಬಾಗಿಲು ತೆರೆದು ನೋಡಿದಾಗ, ಅಡುಗೆ ಮನೆಯಲ್ಲಿ ವಸಂತಾಳ ಶವ ಸಿಕ್ಕರೆ, ಮನೆಯ ಬೆಡ್ ರೂಮ್ ನಲ್ಲಿ ರಾಜೇಶ್ವರಿ ಮತ್ತು ರಾಜೇಶ್ವರಿ ಮೊಮ್ಮಗ ಸಾಯಿಧರ್ಮತೇಜ್ ಶವ ಸಿಕ್ಕಿತ್ತು.
ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಕೊಲೆಯಾದ ರಾಜೇಶ್ವರಿ ಮತ್ತು ವಸಂತಾ ಪುತ್ರ ಸಾಯಿ ಧರ್ಮತೇಜ್
ಮೂವರ ಶವಗಳನ್ನು ನೋಡಿದಾಗ ಆರಂಭದಲ್ಲಿಯೇ ಪೊಲೀಸರು ಕೂಡಾ ಆತ್ಮಹತ್ಯೆಯ ಶಂಕೆಯನ್ನೇ ಹೊಂದಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಆತ್ಮಹತ್ಯೆ ಹೇಗೆ ಮಾಡಿಕೊಂಡರು ಅನ್ನೋದರ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಆತ್ಮಹತ್ಯೆಗೈಯಲು ಕಾರಣಾದ ಯಾವುದೇ ಸಂಗತಿ ಕೂಡಾ ಪತ್ತೆಯಾಗಿರಲಿಲ್ಲ. ತನಿಖೆಯಲ್ಲಿ ಮೂವರು ಕೂಡಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಮೂವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ದೃಢಪಟ್ಟಿತ್ತು. ಹಾಗಾದ್ರೆ ಕೊಲೆ ಮಾಡಿದವರು ಯಾರು ಅಂತ ಪತ್ತೆ ಹಚ್ಚಿದಾಗ ವಸಂತಾಳನ್ನು ಎರಡನೇ ಮದುವೆಯಾಗಿದ್ದ ಆಸೀಫ್ ಎನ್ನುವುದು ಗೊತ್ತಾಗಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಕೊಲೆ ಮಾಡಿದ್ದು ಯಾಕೆ?
ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್‌ನ ಸಹೋದರ ಹೊಸಪೇಟೆ ನಿವಾಸಿ ಆಸೀಫ್ (28) ಮೂವರನ್ನು ಕೊಲೆ ಮಾಡಿದ್ದಾನೆ. ಕೊಲೆಯಾಗಿರುವ ವಸಂತಾಳಿಗೆ ಮೊದಲು ಆಂಧ್ರಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ದಂಪತಿಗೆ ಪುತ್ರ ಸಾಯಿ ಧರ್ಮತೇಜ್ ಜನಿಸಿದ್ದ. ಆದರೆ ಕೌಟುಂಬಿಕ ಕಲಹದಿಂದ ವಸಂತಾ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.
ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ತನ್ನದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್ ಜೊತೆ ಪ್ರೇಮ ಬೆಳೆದಿತ್ತು. ಹೀಗಾಗಿ ಆರೀಫ್ ಮತ್ತು ವಸಂತಾ 6 ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಆರೀಫ್ ಆಗಾಗ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುತ್ತಿದ್ದ.
ಆರೀಫ್‌ಗೆ ಕೂಡಾ ಮೊದಲ ಪತ್ನಿಯಿದ್ದು, ದಂಪತಿಗೆ ಮಕ್ಕಳು ಕೂಡಾ ಇದ್ದರು. ಯಾವಾಗ ಆರೀಫ್ ವಸಂತಾಳನ್ನು ಮದುವೆಯಾದನೋ ಆಗ ಆಸೀಫ್ ಸಿಟ್ಟಾಗಿದ್ದ. ಯಾಕೆಂದರೆ ಆರೀಫ್ ಮದುವೆಯಾಗುವ ಮೊದಲು ಆಸೀಫ್ ವಸಂತಾಳನ್ನು ಪ್ರೀತಿಸುತ್ತಿದ್ದ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದರೆ ಬದಲಾದ ಸಮಯದಲ್ಲಿ ವಸಂತಾ, ಆಸೀಫ್ ಬಿಟ್ಟು ಆತನ ಸಹೋದರ ಆರೀಫ್‌ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು.
ಆರೀಫ್ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಿಟ್ಟಿನಲ್ಲಿ ಸೋಮವಾರ ಸಂಜೆ ಐದರಿಂದ ಆರು ಗಂಟೆ ಸಮಯದಲ್ಲಿ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿ ಧರ್ಮತೇಜ್ ನನ್ನು ಕೊಲೆ ಮಾಡಿದ್ದ. ನಂತರ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ. ಮೂವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೃತ್ಯ ನಡೆದ 24 ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸುವ ಮೂಲಕ ಕಂಬಿ ಹಿಂದೆ ಕಳುಹಿಸಿದ್ದಾರೆ. ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಬಾಳಿ ಬದುಕಬೇಕಿದ್ದ ಮೂವರು ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.