ಹೊನ್ನಾವರದ ಕೆಳಗಿಪಾಳ್ಯದಲ್ಲಿ ದೇವಸ್ಥಾನದ ಗಂಟೆ ಕದ್ದೋಯ್ದ ಕಳ್ಳ – ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮನ ಕೈಚಳಕ

ಹೊನ್ನಾವರ : ಪಟ್ಟಣದ ಕೆಳಗಿಪಾಳ್ಯದ ಜೋಡಿ ಕಟ್ಟೆ ಮಾರುತಿ ದೇವಸ್ಥಾನಕ್ಕೆ ದರ್ಶನ ಪಡೆಯುವ ವೇಷದಲ್ಲಿ ಬಂದ ಕಳ್ಳನೊಬ್ಬ ದೇವಸ್ಥಾನದ ಎರಡು ಗಂಟೆಗಳನ್ನು ಎಗರಿಸಿಕೊಂಡು ಹೋಗಿದ್ದು, ಘಟನೆಯ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಳಗಿನ ಪಾಳ್ಯದದಲ್ಲಿರುವ ಜೋಡಿಕಟ್ಟೆ ಮಾರುತಿ ದೇವಸ್ಥಾನಕ್ಕೆ ಬೆಳೆಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬ ಸುಮಾರು ಒಂದೂವರೆ ತಾಸು ದೇವಸ್ಥಾನದಲ್ಲೇ ಕುಳಿತು ಯಾರು ಇಲ್ಲದನ್ನು ನೋಡಿ, ಒಂದು ಸಣ್ಣ ಮತ್ತು ದೊಡ್ಡದು ಸೇರಿ 2 ಗಂಟೆಗಳನ್ನು ಕದ್ದೋಯ್ದಿದ್ದಾನೆ. ದೇವಸ್ಥಾನಕ್ಕೆ ಭಕ್ತರು ಬಂದಾಗ ಕೈ ಮುಗಿಯುವುದು, ಅಡ್ಡ ನಮಸ್ಕಾರ ಮಾಡುವುದು ಹೀಗೆ ಮಾಡುತ್ತಾ ಒಂದೊಂದೆ ಗಂಟೆಗಳನ್ನು ಎಗರಿಸಿದ್ದಾನೆ…

ಮೊದಲಿಗೆ ದೇವಸ್ಥಾನಕ್ಕೆ ಬಂದವನೇ ದೇವರಿಗೆ ಕೈಮುಗಿದು ಸ್ವಲ್ಪ ವಿಶ್ರಾಂತಿ ಪಡೆಯುವ ನೆಪ ಮಾಡಿ ಕುಳಿತುಕೊಂಡಿದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಯಾರು ಇಲ್ಲದ್ದನ್ನು ನೋಡಿ ಮೊದಲಿಗೆ ಕಟ್ಟೆಯ ಮೇಲೆ ಹತ್ತಿ ಒಂದು ಗಂಟೆ ತೆಗೆದಿದ್ದಾನೆ. ಬಳಿಕ ಮತ್ತೊಂದು ಗಂಟೆ ತೆಗೆಯುವ ವೇಳೆ ಯಾರೋ ಬಂದರೆಂದು ಮತ್ತೇ ಸುಮ್ಮನಾಗಿದ್ದಾನೆ. ಹೀಗೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಲ್ಲೇ ಕುಳಿತಿದ್ದರೂ ಕೂಡ ಆತನ ಕರಾಮತ್ತು ಮಾತ್ರ ಯಾರಿಗೂ ಗೊತ್ತಾಗಿಲ್ಲ. ಇನ್ನೇನು ಯಾರಾದ್ರೂ ಬರ್ತಾರೆ ಅನ್ನೋಷ್ಟರಲ್ಲಿ ಅಲ್ಲೆ ಇದ್ದ ಗೋಣಿ ಚೀಲದಲ್ಲಿ ಎರಡು ಗಂಟೆಗಳನ್ನು ತೆಗೆದುಕೊಂಡು ಕಾಲ್ಕಿತ್ತಿದ್ದಾನೆ.

ಇನ್ನು ಈ ಘಟನೆ ವಿಚಾರವಾಗಿ ನುಡಿಸಿರಿ ವಾಹಿನಿ ಜೊತೆ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಮೇಸ್ತಾ, ಪ್ರತಿದಿನ ದೇವಸ್ಥಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು ಪ್ರತಿದಿನ ಗಂಟೆ ಬಾರಿಸಿ ದೇವಸ್ಥಾನದ ಬಾಗಿಲು ಹಾಕುತ್ತಿದ್ದರು. ಆದ್ರೆ ಸಂಜೆ ಅಧ್ಯಕ್ಷರು ಗಂಟೆ ಬಾರಿಸಲು ಬಂದಾಗ ಗಂಟೆ ಇಲ್ಲದ್ದು ಗಮನಕ್ಕೆ ಬಂದಿದೆ. ಬಳಿಕ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನವಾಗಿರೋದು ಗೊತ್ತಾಗಿದೆ ಎಂದು ಹೇಳಿದ್ರು.

ಇನ್ನೂ ಕಳ್ಳನ ಕೈಚಳಕ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನವಾಗಿರುವ ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಹೊನ್ನಾವರ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿ ಯಾರೇಂದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿರುವ ಪೋಲಿಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ. ಹಾಗೂ ಯಾರಾದರೂ ಗಂಟೆ ಮಾರಾಟಕ್ಕೆ ಬಂದರೆ ಕೂಡಲೇ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಇತ್ತಿಚೀಗೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಲಿಸ್‌ ಇಲಾಖೆ ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕಿ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಪ್ಲೋ..ಎಂಡ್…
ವಿಶ್ವ ಜೊತೆಗೆ ವಿರೇಶ ನುಡಿಸಿರಿ ನ್ಯೂಸ್‌, ಹೊನ್ನಾವರ