ಕೊಡಗಿನಲ್ಲಿ ಮುಂಗಾರು ಮಳೆ: ಮಂಜಿನ ಮಧ್ಯೆ ಪ್ರವಾಸಿಗರಿಗೆ ಹೊಸ ಲೋಕ ತೆರೆದಿಟ್ಟ ಮಡಿಕೇರಿ

ಮಡಿಕೇರಿ, ಜೂನ್ 15: ಮಳೆಗಾಲದಲ್ಲಿ ಮಡಿಕೇರಿ ಪ್ರವಾಸ ತೆರಳುವುದು ಕಷ್ಟ ಅಂತ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕಂದರೆ ಮಳೆಗಾಲದ ಹಸಿರ ಸಿರಿಯಲ್ಲಿ ಮುಖಕ್ಕೆ ಮುತ್ತಿಕ್ಕುವ ಮಂಜಿನ ರಾಶಿಯಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುವುದೇ ಒಂದು ಚೆಂದ. ಸದ್ಯ ಮಡಿಕೇರಿಯಲ್ಲಿ ಮಳೆಗಾಲ ಆರಂಭವಾಗಿದ್ದು ಮಂಜಿನ ಮೆರವಣಿಗೆ ಮಧ್ಯೆ ಪ್ರವಾಸಿಗರಿಗೆ ಹೊಸ ಲೋಕ ತೆರೆದಿಟ್ಟಿದೆ.

ಎಲ್ಲಿ ನೋಡಿದರೂ ದಟ್ಟ ಮಂಜು. ಹತ್ತಿರದ ಜಾಗವೂ ಕಾಣಿಸದಷ್ಟು ದಟ್ಟ ಮಂಜು. ಇಂಥ ಮಂಜಿನ ರಾಶಿಯಲ್ಲಿ ತುಂತುರು ಮಳೆಯಲ್ಲಿ ಚುಮು ಚುಮು ಚಳಿಯಲ್ಲಿ ಕೊಡೆ ಹಿಡಿದು ಜತೆ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಾ ಇರುವ ಪ್ರವಾಸಿಗರು. ಈ ದೃಶ್ಯಗಳೀಗ ಮಡಿಕೇರಿಯಲ್ಲಿ ಸಾಮಾನ್ಯವಾಗಿದೆ.

ವಿಶೇಷವಾಗಿ ಮಡಿಕೇರಿ ರಾಜಸೀಟ್​​ನಲ್ಲಿ ಮಂಜಿನ ಮೆರವಣಿಗೆಯೇ ನಡೆಯುತ್ತಿದೆ. ಬೆಟ್ಟದ ತುತ್ತ ತುದಿಯಲ್ಲಿರೋ ರಾಜಾಸೀಟ್​ನಲ್ಲಿ ಪ್ರವಾಸಿಗರು, ಪ್ರೇಮಿಗಳು, ಹುಡಗರು ಹುಡುಗಿಯರು ಹೀಗೆ ಎಲ್ಲರೂ ಕಚಗುಳಿ ಇಡೋ ಮಂಜಿನ ಮಧ್ಯೆ ಸೆಲ್ಫಿ ತೆಗೆಯುತ್ತಾ ಮನಸಾರೆ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಜೂನ್ ತಿಂಗಳಾಗಿರೋದರಿಂದ ಆಗಾಗ್ಗೆ ಜಿಟಿಪಿಟಿ ಮಳೆಯ ಸಿಂಚನವೂ ಇರುತ್ತದೆ.

ಮಡಿಕೇರಿ ಮಾತ್ರವಲ್ಲದೆ ಜೀವನದಿ ಕಾವೇರಿಯ ಹುಟ್ಟುರು ತಲಕಾವೇರಿಯ ಬೆಟ್ಟ ಗುಡ್ಡಗಳಲ್ಲಿ ಮಂಜಿನ ರಾಶಿಯೇ iದೆ. ಇದು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಭಕ್ತಿಯ ಪರಾಕಾಷ್ಟೆಯನ್ನೂ ಹೆಚ್ಚಿಸುತ್ತದೆ. ಇತ್ತ ರಾಜೀಸೀಟ್​ನಲ್ಲಿ ಇತ್ತೀಚೆಗೆ ಮೈ ನವಿರೇಳಿಸುವ ಜಿಪ್ ಲೈನ್ ಆರಂಭಿಸಲಾಗಿದೆ. ಬೆಟ್ಟದ ತುತ್ತ ತುದಿಯಲ್ಲಿ ಮಂಜು ಮುಸುಜಿದ ವಾತಾವರಣದಲ್ಲಿ ಜಿಪ್​ ಲೈನ್​ನಲ್ಲಿ ಸಾಗುವುದೇ ಜನರಿಗೆ ರೋಚಕ ಅನುಭವ.

ಹೇಳಿ ಕೇಳಿ ರಾಜಾಸೀಟ್ ಬೆಟ್ಟದ ಮೇಲೆ ಇರುವುದರಿಂದ ವೀವ್ ಪಾಯಿಂಟ್​ನಲ್ಲಿ ನಿಂತು ಸುತ್ತಲ ಪಶ್ಚಿಮ ಘಟ್ಟದ ರುದ್ರ ರಮಣೀಯ ಸೌದರ್ಯವನ್ನ ಆಸ್ವಾದಿಸಬಹುದು. ಸ್ವಚ್ಛ ಪರಿಸರ ಮೇಲೆ ಬೃಹತ್ ಹಡಗು ತೇಲಿ ಬಂದಂತೆ ಭಾಸವಾಗುವ ಮಂಜಿನ ರಾಶಿ ಪ್ರವಾಸಿಗರನ್ನ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ. ಒಂದೆಡೆ ಮಳೆ , ಮಂಜು, ಪ್ರಕೃತಿ ಅದರ ಮಧ್ಯೆ ಸಾಹಸ ಚಟುವಟಿಕೆ ಎಲ್ಲಾ ಸೇರಿ ಪ್ರವಾಸಿಗರಿಗೆ ಹೊಸ ಲೋಕವನ್ನೇ ತೆರೆದಿಟ್ಟಿದೆ.

ಒಟ್ಟಿನಲ್ಲಿ ಈ ತರಹ ಮಂಜು ಮಳೆಯನ್ನ ಆಸ್ವಾದಿಸಬೇಕು ಅಂದರೆ ಬಹುಶಃ ಈದು ಪರಿಪಕ್ವ ಸಮಯ. ಮಳೆಯೂ ಕಡಿಮೆ ಇದೆ. ಇನ್ನು ಜುಲೈ ಆಗಸ್ಟ್ ಬಂತೆಂದರೆ ರಣ ಮಳೆ ಶುರುವಾಗುತ್ತದೆ. ಆಗ ಪ್ರವಾಸವನ್ನು ಎಂಜಾಯ್ ಮಾಡುವುದು ಕಷ್ಟ. ಹಾಗಾಗಿ ಸದ್ಯ ಕೊಡಗು ಜಿಲ್ಲೆ ಪ್ರವಾಸಕ್ಕೆ ಸೂಕ್ತ ಸಮಯವಾಗಿದೆ.