ಅಂಕೋಲಾ ಜೂನ್ 05 : ಯಾವುದೇ ದೇವಸ್ಥಾನದಲ್ಲಿ ಪೂಜೆ- ಸಮಾರಂಭ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಪ್ರಸಾದವಾಗಿ ಕಜ್ಜಾಯ ಮತ್ತಿತರ ಸಿಹಿ ಖಾದ್ಯ ವಿತರಿಸಲಾಗುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಮತ್ತು ದೇವರ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮದಲ್ಲಿ ಪ್ರಸಾದವಾಗಿ ಭಕ್ತರಿಗೆ ಗಿಡ ನೀಡುವ ಪರಿಸರ ಕಾಳಜಿಯ ವಿನೂತನ ಸಂಪ್ರದಾಯಕ್ಕೆ ಮುಂದಾಗಿದೆ.
ಹೌದು…ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ಶ್ರೀ ಜೈನಜಟಕ, ಶ್ರೀ ಮಹಾದೇವಿ, ಶ್ರೀ ನಾಗದೇವತೆ ದೇವಸ್ಥಾನದಲ್ಲಿ ಇಂಥದ್ದೊಂದು ಮಾದರಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ನೂರಾರು ವರ್ಷಗಳ ಹಳೆಯದಾದ ದೇವಸ್ಥಾನವನ್ನು ಈ ವರ್ಷ ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ನೂತನ ಕಟ್ಟಡ, ಮೂರ್ತಿ ಪ್ರತಿಷ್ಠಾಪನೆಯ ಪೂಜಾ ಕಾರ್ಯಕ್ರಮವನ್ನು ಪ್ರಕೃತಿ ಆರಾಧನೆಯ ಪರಿಕಲ್ಪನೆಯಲ್ಲಿ ವಿಶ್ವ ಪರಿಸರ ದಿನವಾದ ಜೂ.5ರಂದೇ ಆರಂಭಿಸಲು ನಿರ್ಧರಿಸಲಾಗಿದೆ.
ಮರ ಕತ್ತರಿಸಿ ದೇವಸ್ಥಾನ ನಿರ್ಮಿಸುವ ಜನರ ನಡುವೆ ದೇವಸ್ಥಾನ ನಿರ್ಮಿಸಿ ಮರ ಬೆಳೆಸುವ ಈ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಪರಿಕಲ್ಪನೆ ಧಾರ್ಮಿಕ ವಲಯದಲ್ಲಿ ಬಹಳ ಕುತೂಹಲ ಮೂಡಿಸಿದೆ. ಜೂ.5ರಂದು ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ದೇವರ ಕಾರ್ಯ ಆರಂಭವಾಗುತ್ತದೆ. ಬಳಿಕ ತೋರಣ ಮುಹೂರ್ತ ನಡೆಯಲಿದೆ. ನಂತರದ ಐದು ದಿನಗಳು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಆಯೋಜನೆಗೊಂಡಿವೆ.
ಪೂಜೆಯ ಕೊನೆಯ ದಿನವಾದ ಜೂ.10ರಂದು ಹೋಮ, ಹವನ ನಡೆಯುತ್ತದೆ. ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ನಡೆಸಲಾಗುತ್ತದೆ. ಬಳಿಕ ಭಕ್ತರಿಗೆ ಸಿಹಿ ಪ್ರಸಾದದ ಜತೆಗೆ ಗಿಡವನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಸಂಪಿಗೆ, ನೆಲ್ಲಿ, ಮುರುಗಲು, ನೇರಳೆ ಹೀಗೆ ವಿಶೇಷ ಗಿಡಗಳನ್ನೇ ವಿತರಿಸಲಾಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯೂ ಸಹಕಾರ ನೀಡಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಮೋದ ಹರಿಕಾಂತ ತಿಳಿಸಿದ್ದಾರೆ.
ಇದು ಜೈನರ ಕಾಲದ ದೇವಸ್ಥಾನವಾಗಿದೆ. ಶತಮಾನಗಳ ಹಿಂದೆ ದೇವಸ್ಥಾನವು ಮರಗಳ ದಟ್ಟ ಹಸಿರಿನ ನಡುವೆ ಇತ್ತಂತೆ. 1959ರ ವೇಳೆಗೆ ಇಲ್ಲಿ ಪುಟ್ಟ ದೇವಸ್ಥಾನ ನಿರ್ಮಿಸಲಾಗಿತ್ತು. ಕೆಲ ವರ್ಷಗಳ ಹಿಂದೆ ದೇವಸ್ಥಾನದ ಪಕ್ಕದಲ್ಲಿ ಗುಡ್ಡ ಸಣ್ಣದಾಗಿ ಕುಸಿದಿತ್ತು. ಈಗಿನ ನೂತನ ದೇವಸ್ಥಾನ ಕಟ್ಟುವಾಗ ಆ ಸ್ಥಳವನ್ನೆಲ್ಲ ಅಭಿವೃದ್ಧಿ ಮಾಡಿ ಮರ ಬೆಳೆಸುವ ಯೋಜನೆ ಇದೆ. ನೂತನ ದೇವಸ್ಥಾನದ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಗಳು ಹಳದಿಪುರದ ಧರಣೇಂದ್ರ ಎಂ. ಇಂದ್ರ ಅವರ ಹಿರಿತನದಲ್ಲಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಎಲ್ಲಿದೆ ಊರು?
ಬಿಳಿಹೊಂಯ್ಗಿಯು ಗಂಗಾವಳಿ ನದಿ ತೀರದಲ್ಲಿರುವ ಗುಡ್ಡದ ಅಂಚಿನ ಪುಟ್ಟ ಊರು. ಸುಮಾರು 60 ಮೀನುಗಾರ ಕುಟುಂಬಗಳು ಇವೆ. ಕಳೆದ ನಾಲ್ಕೆöÊದು ವರ್ಷಗಳಿಂದ ಮಳೆಗಾಲದಲ್ಲಿ ಗಂಗಾವಳಿ ನದಿ ಉಕ್ಕಿ ಹರಿದು ಗ್ರಾಮವೇ ಜಲಾವೃತ ಆಗುತ್ತದೆ. ಇಲ್ಲಿನ ದೇವಸ್ಥಾನವು ಎಷ್ಟು ವರ್ಷಗಳು ಹಳೆಯದ್ದು ಎನ್ನುವುದಕ್ಕೆ ನಿಖರ ದಾಖಲೆ ಇಲ್ಲ. ಆದರೆ, ಕರಾವಳಿ ಭಾಗದ ಜೈನ ಜಟಗ ದೇವಸ್ಥಾನಗಳು ಶತ ಶತಮಾನಗಳ ಹಿಂದೆ ಜೈನರ ಕಾಲದಲ್ಲಿ ನಿರ್ಮಾಣ ಆಗಿವೆ. ರಾಣಿ ಚೆನ್ನಭೈರಾದೇವಿ ಕಾಲದಲ್ಲಿ ಜೈನ ನೆಲೆಗೆ ಸ್ವಲ್ಪ ಆದ್ಯತೆ ಸಿಕ್ಕಿವೆ. ಜೈನ ಪದ್ಧತಿಯ ಇಂಥ ದೇವಸ್ಥಾನಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು ಎಂದು ಇತಿಹಾಸಕಾರರಾದ ಲಕ್ಷಿö್ಮÃಶಹೆಗಡೆ ಸೋಂದಾ ತಿಳಿಸಿದರು.
ಧಾರ್ಮಿಕ ಕಾರ್ಯಗಳು
ಜೂ.5ರಂದು ಗಿಡ ನೆಟ್ಟು ಧಾರ್ಮಿಕ ಕಾರ್ಯಗಳು ಆರಂಭ. ಜೂ.6 ರಂದು ಕಂಕಣ ಬಂಧನ, ಧ್ವಜಾರೋಹಣ, ಗೋಪೂಜೆ, ಅಖಂಡ ದೀಪ ಸ್ಥಾಪನೆ ಇತ್ಯಾದಿ. ಜೂ.7ರಂದು ವಜ್ರ ಪಂಜರ ಆರಾಧನೆ, ನಾಗಾರ್ಜುನ ಯಂತ್ರಾರಾಧನೆ, ಸರ್ವದೋಷ ಪ್ರಾಯಶ್ಚಿತ ಆರಾಧನೆ, ಕ್ಷೇತ್ರಪಾಲ ಆರಾಧನೆ; ಜೂ.8ರಂದು ಬ್ರಹ್ಮ ಕಳಶ ಮೆರವಣಿಗೆ, ಪೀಠಶುದ್ಧಿ, ಹವನ, ಬಲಿ ಪೂಜೆಗಳು; ಜೂ.9ರಂದು ಶ್ರೀ ಜೈನಜಟಕ, ಶ್ರೀ ಮಹಾದೇವಿ, ಶ್ರೀ ನಾಗದೇವತೆ ಮತ್ತು ಪರಿವಾರ ದೇವರುಗಳ ಪ್ರತಿಷ್ಠಾಪನೆ, ಅಷ್ಟಬಂಧ, ಕಲಾವೃದ್ಧಿ, ಜಪ, ಬೂತ ಬಲಿ ವಿಧಾನ; ಜೂ.10ರಂದು ಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ನವಚಂಡಿ ಹವನ, ಪೂರ್ಣಾಹುತಿ, ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ, ಗಿಡ ವಿತರಣೆ ನಡೆಯಲಿದೆ.