ಕುಮಟಾದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ


ಕಾರವಾರ ಮೇ. 30 :
 ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವ ಪರಿಸರ ದಿನಾಚರಣೆ 2024 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಕಾರವಾರ, ಸಂಗಮ ಸೇವಾ ಸಂಸ್ಥೆ (ರಿ) ಬಾಳೇಗುಳಿ, ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಹಾಗೂ ಅದು ಕೇವಲ ವಿಶ್ವ ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿರದೆ ದಿನನಿತ್ಯದ ಕಾಯಕವಾಗಬೇಕು ಎಂದು ಹೇಳಿದ್ರು.

ವಿದ್ಯಾರ್ಥಿಗಳಿಗೆ ಭೂ ಮರುಸ್ಥಾಪನೆ, ಮರು-ಭೂಮಿಕರಣ ಹಾಗೂ ಬರ ತಡೆಯುವಿಕೆ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಪರಿಸರ ತಾಯಿಗಿಂತಲೂ ಮಿಗಿಲು ಯಾಕೆಂದರೆ ತಾಯಿ ಕೇವಲ ತನ್ನ ಮಕ್ಕಳನ್ನು ಪೋಷಿಸುತ್ತಾಳೆ, ಆದರೆ ಪರಿಸರ ಭೇದ ಭಾವ ಮಾಡದೇ ಎಲ್ಲರನ್ನು ಪೋಷಿಸುತ್ತದೆ. ಆದ್ದರಿಂದ ಮುಂದಿನ ತಲೆಮಾರಿನ ಚಿಂತನೆ ಮಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಬೇಕು ಪ್ರತಿ ವ್ಯಕ್ತಿಗೆ ಕೊರೋನಾ ಸಮಯದಲ್ಲಿ ಪರಿಸರದ ಅರಿವಾಗಿದ್ದು, ಉಳಿಸುವ ಅಗತ್ಯತೆಯ ಚಿಂತನೆ ಪ್ರಾರಂಭ ಮಾಡಿದ್ದಾನೆ ಆದರೆ ಕೇವಲ ವಿಶ್ವ ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿರದೆ ದಿನನಿತ್ಯದ ಕಾಯಕವಾಗಬೇಕು ಎಂದು ಹೇಳಿದ್ರು..

ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದ್ದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಹಾಳಾಗುತ್ತಿದೆ. ಜೊತೆಗೆ ಹವಾಮಾನ ವೈಪರಿತ್ಯ ಆರೋಗ್ಯದ ಸಮಸ್ಯೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೀತಿ ಭಂಡಾರಕರ ನಾವು ಪರಿಸರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ನಾವು ಪ್ರತಿಯೊಬ್ಬರು ಕೈಜೋಡಿಸಬೇಕು. ಪರಿಸರದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಹೀಗಾಗಿ ನಾವೆಲ್ಲ ಉತ್ತಮ ಪರಿಸರದ ನಿರ್ಮಾಣಕ್ಕೆ ಪ್ರಯತ್ನ ಮಾಡಬೇಕು ಎಂದರು. 

ಕಾರ್ಯಕ್ರಮದಲ್ಲಿ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ತಿಮ್ಮಣ್ಣ ಭಟ್ಟ ಉಪಸ್ಥಿತರಿದ್ದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್.ಶೆಟ್ಟಿ, ಸ್ವಾಗತಿಸಿದರು.