ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಎರಡು ನೂರಕ್ಕೂ ಹೆಚ್ಚು ಅಡಿಕೆ ಗಿಡಗಳಿಗೆ ಹಾನಿ ಮಾಡಿದ ಘಟನೆ ಬುಧವಾರ ನಡೆದಿದೆ.
ಶಿವಲಿಂಗಪ್ಪ ಕಳಸಗೇರಿ ಜಮೀನಿನಲ್ಲಿ ಬೆಳೆದ 175 ಅಡಿಕೆ ಗಿಡಗಳಿಗೆ ಹಾಗೂ ಬಸಪ್ಪ ಕಳಸಗೇರಿ ಜಮೀನಿನ 50 ಕ್ಕೂ ಹೆಚ್ಚು ಅಡಿಕೆ ಗಿಡಗಳಿಗೆ ಕಾಡು ಹಂದಿಗಳು ದಾಳಿ ಮಾಡಿ ಹಾನಿ ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಡಿಕೆ ಗಿಡಗಳಿಗೆ ಹಾನಿಯಾಗಿದೆ. ಎರಡು ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಾನಿ ಮಾಡಿವೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಕಳೆದ ಎರಡು ಮೂರು ವರ್ಷಗಳಿಂದ ಕಾಡು ಹಂದಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸಂಬಂದಪಟ್ಟ ಅಧಿಕಾರಿಗಳು ಕಾಡು ಹಂದಿಗಳಿಂದ ರೈತರಿಗೆ ಆಗುವ ತೊಂದರೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಸನವಳ್ಳಿ ಗ್ರಾಮದ ರೈತ ಮುಖಂಡ ನಾಗರಾಜ ಗುಬ್ಬಕ್ಕನವರು ಆಗ್ರಹಿಸಿದ್ದಾರೆ.