ಅಂಕೋಲಾ: ನಡೆ ನುಡಿ ಸಿದ್ಧಾಂತವಿಲ್ಲದೇ ಹುಟ್ಟಿದ ಸಾಹಿತ್ಯ ಎಂದಿಗೂ ಕ್ಷಣಿಕ. ರಕ್ತ ಮಾಂಸವನ್ನು ಬದುಕಿನಿಂದ ತೆತ್ತುಕೊಂಡ ಸಾಹಿತ್ಯವೇ ಶಾಶ್ವತ. ಅಂತಹ ಬದುಕಿನ ನೈತಿಕ ಬದ್ಧತೆಯಿಂದ ಸತ್ಯ ಶುದ್ಧತೆಯ ಕಾವ್ಯ ರಚಿಸಿದವರು ವಿಷ್ಣು ನಾಯ್ಕರು ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನ ಎ.ವಿ ಸಭಾಂಗಣದಲ್ಲಿ ಬುಧವಾರ ನಡೆದ ನಾಡಿನ ನಾಮಾಂಕಿತ ಸಾಹಿತಿ, ಪ್ರಕಾಶಕ, ಸಂಘಟಕ, ಸಮಾಜವಾದಿ ಚಿಂತಕ ವಿಷ್ಣು ನಾಯ್ಕರ ಬದುಕು- ಬರಹಗಳ ವಿಚಾರ ಸಂಕಿರಣ ‘ಅಮರ -ಅಂಬಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಷ್ಣು ನಾಯ್ಕರ ಸಾಹಿತ್ಯ ಓದಿದರೆ ಗಾಢವಾಗಿ ತಟ್ಟುವುದು ಹಸಿವು. ಅವರು ಬದುಕಿನ ಹಸಿವು ಹಾಗೂ ಸುತ್ತಲಿನ ಜನರ ಒಳಸಂಕಟಗಳ ಅರಿವಿನ ಭಾವದಿಂದ ಬರಹವನ್ನು ಬದುಕಾಗಿಸಿ ಹೋರಾಟಕ್ಕೆ ತೊಡಗಿದವರು. ಹೋರಾಟ ಮತ್ತು ಬದುಕು ವಿಷ್ಣು ನಾಯ್ಕರ ಜೀವನದ ಎರಡು ನಾಣ್ಯದ ಒಂದು ಮುಖ ಎಂದರು.
ಸಾಹಿತ್ಯ ಹೋರಾಟ ಪತ್ರಿಕೆ ಪ್ರಕಾಶನ ಸಂಘಟನೆ ಹೀಗೆ ಹಲವು ರಂಗಗಳಲ್ಲಿ ತೊಡಗಿಕೊಂಡ ವಿಷ್ಣು ನಾಯ್ಕರು ಅಧ್ಯಾಪಕರಾಗಿ ಸಾಮಾಜಿಕ ಹೊಣೆಗಾರಿಕೆಯ ಎಚ್ಚರಿಕೆಯನ್ನು ಹೊತ್ತು ಕೊನೆಯವರೆಗೆ ಜಾಗೃತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದವರು. ಆತ್ಮವಿಮರ್ಶೆಯ ನಿಷ್ಠುರ ಗುಣ ಅವರದ್ದಾಗಿದೆ. ತಮ್ಮನ್ನು ಮೊದಲು ವಿಮರ್ಶಿಸಿ ನಂತರ ಸಮಾಜವನ್ನು ವಿಮರ್ಶೆ ಮಾಡುತ್ತಿದ್ದರು. ಒಪ್ಪದ ಸಿದ್ಧಾಂತಗಳಿಗಿಂತ ಮಾನವತ್ವ ದೊಡ್ಡದು ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳ ಭಾವನೆ ಗೌರವಿಸಲು ತಮ್ಮ ಪ್ರಕಾಶನಕ್ಕೆ ರಾಘವೇಂದ್ರ ಎನ್ನುವ ಹೆಸರನ್ನಟ್ಟಿದ್ದರು. ಮಾನವೀಯ ಬಂಧುತ್ವದ ಬಳಗ ಪ್ರಜ್ಞೆಯಿಂದ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಾರ್ಥಕತೆಯ ಕೃತಿ ರಚಿಸಿದವರು ವಿಷ್ಣು ನಾಯ್ಕ. ಸಾಹಿತ್ಯದ ನವ್ಯ ನವೋದಯ ಪ್ರಗತಿಶೀಲ ಬಂಡಾಯ ಹೀಗೆ ಎಲ್ಲಾ ಚಳುವಳಿಗಳಿಂದ ಅಂತರ ಕಾಪಾಡಿಕೊಂಡು ಬಡತನ ಹಸಿವು ಅನಕ್ಷರತೆಯ ಎಚ್ಚರವೇ ಚಳುವಳಿಯ ತತ್ವಗಳಿಗಿಂತ ದೊಡ್ಡದು ಎಂದು ಭಾವಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ನೇರ ನೈತಿಕ ನಿಷ್ಠುರ ವಿಮರ್ಶಕ ಪ್ರೊ. ಜಿ ಎಚ್ ನಾಯಕರು ವಿಷ್ಣು ನಾಯ್ಕರ ಕುರಿತಾಗಿ ತೋರುತ್ತಿದ್ದ ಭಾವನೆಯೇ ನನಗೆ ವಿಷ್ಣು ನಾಯ್ಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು. ಅವರು ರಚಿಸಿದ ದುಡಿಯುವ ಕೈಗಳು ಕೃತಿ ವ್ಯಕ್ತಿಯೊಬ್ಬನ ಚಿಂತನೆಯ ಬರಹವಲ್ಲ ಬದಲಾಗಿ ಸಾಮಾಜಿಕ ಹೋರಾಟದ ಚರಿತ್ರೆ ಎಂದು ಅವರು ತಿಳಿಸಿದರು.
ವಿಷ್ಣು ನಾಯ್ಕರ ಆಯ್ದ ಕೃತಿಗಳನ್ನು ಜಿ.ಸಿ. ಕಾಲೇಜಿನ ಗೃಂಥಾಲಯಕ್ಕೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಸಂಘಟನೆ ರೂಪು ರೇಷೆಗಳನ್ನು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮತ್ತು ವಿಷ್ಣು ನಾಯ್ಕ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ನಾಯಕ ವಿಷ್ಣು ನಾಯ್ಕ. ಅವರೆಂದರೆ ಬೆರಗು ಮೂಡಿಸುವ ಸ್ಪೂರ್ತಿ. ತನ್ನೂರು ಅಂಬಾರಕೊಡ್ಲಾವನ್ನು ಸಾಹಿತ್ಯದ ಮೂಲಕ ಅಂಬಾರಕ್ಕೆ ಏರಿಸಿದವರು ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಅಂಕೋಲಾದಲ್ಲಿ ಸಾಹಿತ್ಯ ಬಳಗವನ್ನು ಹುಟ್ಟು ಹಾಕಿದವರಲ್ಲಿ ವಿಷ್ಣು ನಾಯ್ಕ ಒಬ್ಬರು ಎಂದರು.ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಸಾಹಿತ್ಯದ ಮೂಲಕ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದವರು ವಿಷ್ಣು ನಾಯ್ಕ.ಅವರು ಜಿಲ್ಲೆಯ ಹೆಮ್ಮೆ ಎಂದರು.
ವಿಷ್ಣು ನಾಯ್ಕರ ಪುತ್ರಿ ಅಮಿತಾ ನಾಯ್ಕ, ವಿಷ್ಣು ನಾಯ್ಕರ ಕವಿತೆಯನ್ನು ಹಾಡಿದರು. ಪತ್ರಕರ್ತ ಸುಭಾಸ್ ಕಾರೇಬೈಲ್ ಕಾರ್ಯಕ್ರಮ ನಿರೂಪಿಸಿದರು. ಕು. ಮಾನಸಾ ವಾಸರೆ ಪ್ರಾರ್ಥನಾ ಗೀತೆ ಹಾಡಿದರು.ಕಸಾಪದ ಪಿ.ಆರ್.ನಾಯ್ಕ ಸ್ವಾಗತಿಸಿದರು. ಕಸಾಪದ ಮೂರ್ತುಜಾ ಹುಸೇನ್ ಅತಿಥಿಗಳನ್ನು ಪರಿಚಯಿಸಿದರು.ಕಸಾಪ ಅಂಕೋಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವಂದಿಸಿದರು. ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ, ಜಾರ್ಜ್ ಫರ್ನಂಡೀಸ್ ವೇದಿಕೆಯಲ್ಲಿದ್ದರು.
ರಮಾನಂದ ನಾಯಕ, ಮಹೇಶ ಗೊಳಿಕಟ್ಟೆ, ರಾಜೇಶ್ ಮಾಸ್ತರ್, ರಾಮಕೃಷ್ಣ ಗುಂದಿ, ಮೋಹನ ಹಬ್ಬು, ನಾಗೇಂದ್ರ ನಾಯಕ ಸೇರಿದಂತೆ ಸಾಹಿತ್ಯ ಪ್ರೇಮಿಗಳು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.