ಬೆಳಗಾವಿ: ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಭಾರಿ ಸದ್ದು ಮಾಡಿತ್ತು. ಕಳೆದ ಕೆಲ ತಿಂಗಳ ಹಿಂದೆ ರೈಲಿನಲ್ಲಿ ಮತ್ತು ಬರುವ ಚಾಕಲೇಟ್ ನೀಡಿ ನಗನಾಣ್ಯವನ್ನು ಗ್ಯಾಂಗ್ ದೋಚಿತ್ತು. ಇದೀಗ ಆ ಗ್ಯಾಂಗ್ ಬಳಿಕ ಬಸ್ನಲ್ಲಿ ಜ್ಯೂಸ್ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ನಲ್ಲಿಯೇ ಜ್ಯೂಸ್ ಹಾಗೂ ಬಾಳೆ ಹಣ್ಣು ಕೊಟ್ಟು ನಗನಾಣ್ಯ ದೋಚಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.
ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರಿಂದ ಗ್ಯಾಂಗ್ ಸುಲಿಗೆ ಮಾಡಿದೆ. ಜ್ಯೂಸ್ನಲ್ಲಿ ಮೂರ್ಛೆ ಬರುವ ಪದಾರ್ಥ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿದ್ದು, ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ. ಸದ್ಯ ಹದಿನಾಲ್ಕು ಗಂಟೆಯಿಂದ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಂಜೀವ್ ಖೋತಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತೀಚೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಓಡಾಡುವ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್ ಆಗಿತ್ತು. ರೈಲಿನಲ್ಲಿ ಪ್ರಯಾಣಿಕರ ಸೊಗಿನಲ್ಲಿ ಬಂದು ದರೋಡೆ ಮಾಡ್ತಿದ್ದ ಗ್ಯಾಂಗ್ನ ಮಸಲತ್ತಿಗೆ ಸಿಕ್ಕು ಎಂಟು ಜನ ನರಳಾಡಿ ಹೋಗಿದ್ದರು. ಬಳಿಕ ಆ ಖತರ್ನಾಕ್ ಚಾಕೊಲೇಟ್ ಗ್ಯಾಂಗ್ ಪೊಲೀಸರ ಖೆಡ್ಡಾಗೆ ಬಿದ್ದಿತ್ತು.
ಚಾಕೊಲೇಟ್ ಕರ್ನಾಟಕ ಗೋವಾ ಗಡಿಯಲ್ಲಿ ರೇಲ್ವೆ ಪೊಲೀಸರು ಮತ್ತು ಪ್ರಯಾಣಿಕರ ನಿದ್ದೆಗೆಡಸಿತ್ತು. ಪ್ರಯಾಣಿಕರ ಸೊಗಿನಲ್ಲಿ ಬರ್ತಿದ್ದ ಗ್ಯಾಂಗ್ ಬೇರೆ ಪ್ರಯಾಣಿಕರ ಜತೆಗೆ ಗೆಳೆತನ ಬೆಳಸಿ ತಮ್ಮವರಂತೆ ವರ್ತನೆ ಮಾಡಿ ಚಾಕೊಲೇಟ್ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದರು. ಹೀಗೆ ಪ್ರಜ್ಞೆ ತಪ್ಪಿದ ಬಳಿಕ ಪ್ರಯಾಣಿಕರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನ ದೋಚಿ ಪರಾರಿ ಆಗುತ್ತಿದ್ದರು. ಆ ಗ್ಯಾಂಗ್ ರೈಲ್ವೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದೆ. ಈ ಖರ್ತನಾಕ್ ಖದೀಮರನ್ನ ಬಂಧಿಸಲು ಗೋವಾ, ಬೆಳಗಾವಿ ರೈಲ್ವೆ ಪೊಲೀಸರು ಎರಡು ವಾರಗಳಿಂದ ಹಗಲು ರಾತ್ರಿ ನಿದ್ದೆಯಿಲ್ಲದೆ ಕಾರ್ಯಾಚರಣೆ ನಡೆಸಿ ಕಡೆಗೂ ಮೂರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.