ಸಮಸ್ಯೆ ಇದೆ ಎಂದು ಹೇಳಿಕೊಂಡರೂ ಹೆಚ್ಚಿನ ಕೆಲಸ ಕೊಟ್ಟು ಅಧಿಕಾರಿಗಳು ಮಹಿಳಾ ಕಂಡಕ್ಟರ್ಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೀಪಾಂಜಲಿ ನಗರದ KSRTC ಡಿಪೋ 5ರ ಕಂಡಕ್ಟರ್ ಮಂಜಮ್ಮ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ಹಾಗೂ ಈ ಬಗ್ಗೆ ಸಿಎಂ, ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು, ಮಾರ್ಚ್.17: ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ (Karnataka Government) ಶಕ್ತಿ ಯೋಜನೆ (Free Bus Service For Women) ಜಾರಿ ಮಾಡಿದೆ. ಆದರೆ ಶಕ್ತಿ ಯೋಜನೆಗಾಗಿ ಕೆಎಸ್ಆರ್ಟಿಸಿಯಲ್ಲಿ (KSRTC) ಮಹಿಳಾ ಕಂಡಕ್ಟರ್ಗಳಿಗೆ ಹಗಲು ರಾತ್ರಿ ಶ್ರಮಿಸುವಂತೆ ಅಧಿಕಾರಿಗಳು ಟಾರ್ಚರ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಿಂಗಳ ಋತುಚಕ್ರದ ಸಮಸ್ಯೆ ಇದ್ದರೂ ಡ್ಯೂಟಿ ಮಾಡಿ ಅಂತಾರೇ ಎಂದು ದೀಪಾಂಜಲಿ ನಗರದ KSRTC ಡಿಪೋ 5ರ ಕಂಡಕ್ಟರ್ ಮಂಜಮ್ಮ ವಿಡಿಯೋ ಮಾಡಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಇನ್ನು ಮತ್ತೊಂದೆಡೆ ಅಧಿಕಾರಿಗಳ ಕಿರುಕುಳದ ಬಗ್ಗೆ ಸಿಟಿಎಂ ಅಂತೋಣಿ ಜಾರ್ಜ್ ಅವರ ಗಮನಕ್ಕೆ ತಂದರೆ ಅವರು ದರ್ಪದ ಮಾತುಗಳನ್ನಾಡುತ್ತಾರೆ ಎಂದು ಮಹಿಳಾ ಕಂಡಕ್ಟರ್ ಆರೋಪಿಸಿದ್ದಾರೆ. ಅಲ್ಲದೆ ಸಿಟಿಎಂ ಅಂತೋಣಿ ಜಾರ್ಜ್ ದರಿದ್ರ ಅಂತ ನಿಂದಿಸಿರುವ ಆಡಿಯೋ ಕೂಡ ಲಭ್ಯವಾಗಿದೆ. ಮಂಜಮ್ಮ ಅವರು ಅಧಿಕಾರಿಗಳ ಟಾರ್ಚರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದಿದ್ದಾರೆ. ದೀಪಾಂಜಲಿ ನಗರದ ಡಿಪೋ 5ರ 44 ಜನರ ಸಹಿ ಹಾಕಿ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಟಾರ್ಚರ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಮಹಿಳಾ ಕಂಡಕ್ಟರ್ ಮಂಜಮ್ಮಗೆ ಡ್ಯೂಟಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಡಿಪೋ ಮ್ಯಾನೇಜರ್ ಎಂ.ಕೃಷ್ಣಪ್ಪ ಅವರು ಬೇಗ ಬಂದರೂ ಲೇಟ್ ಆಗಿ ಡ್ಯೂಟಿ ನೀಡ್ತಿದ್ದಾರೆ. ಎಷ್ಟೇ ತಡವಾದ್ರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಟಾರ್ಚರ್ ಮಾಡ್ತಿದ್ದಾರೆ. ಡಿಪೋದ ಇತರ ಅಧಿಕಾರಿಗಳ ಗಮನಕ್ಕೂ ತಂದರೂ ಅವರಿಂದಲೂ ಟಾರ್ಚರ್ ಆಗ್ತಿದೆ. ಅಧಿಕಾರಿಗಳ ಟಾರ್ಚರ್ ಗೆ ರೋಸಿ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ನಾನು ಸೇರಿ 44 ಸಿಬ್ಬಂದಿ ಸಹಿ ಹಾಕಿದ್ದಾರೆ ಎಂದು ಮಂಜಮ್ಮ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಬೆಳಿಗ್ಗೆಯಿಂದ ಸಂಜೆವರೆಗೂ ಡ್ಯೂಟಿ ನೀಡದೆ ಸುಮ್ಮನೆ ರಜೆ ಅಂತ ಬರೆಯುತ್ತಿದ್ದಾರೆ. ತಡವಾಗಿ ಗಾಡಿ ಕೊಟ್ಟು ಪೂರ್ತಿ ಕಿಲೋ ಮೀಟರ್ ಮಾಡಬೇಕು ಅಂತ ಟಾರ್ಚರ್ ನೀಡ್ತಿದ್ದಾರೆ. ಡಿಪೋ ಮ್ಯಾನೇಜರ್ ಕೇಳಿದ್ರೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಘಟಕದಲ್ಲಿ ಸುಮ್ಮನೆ ಮೂರ್ನಾಲ್ಕು ದಿನ ಕೂರಿಸಿಕೊಂಡು ರಜೆ ಅರ್ಜಿ ಬರೆಸಿಕೊಳ್ತಿದ್ದಾರೆ. ಮಹಿಳೆಯರಿಗೆ ತೊಂದರೆ ಇದೆ ಅಂದರೂ, ತಡವಾಗಿ ಗಾಡಿಕೊಟ್ಟು ಟ್ರಿಪ್ ಪೂರ್ತಿ ಮಾಡಲು ಟಾರ್ಚರ್ ನೀಡ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಡಿಪೋ 5ರ 44 ಜನರ ಸಹಿ ಹಾಕಿ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ. ಇನ್ನು ಕಂಡಕ್ಟರ್ ಮಂಜಮ್ಮ ಅವರು ಈ ಹಿಂದೆ ಸಿಎಂಗೂ ಜನಸ್ವಂದನ ಕಾರ್ಯಕ್ರಮದಲ್ಲಿ ದೂರು ನೀಡಿದ್ದರು.