ಹೊನ್ನಾವರ, ಏಪ್ರಿಲ್ 27, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೊನ್ನಾವರದ ಸಾನ್ವಿ ರಾವ್, ದ್ವಿತೀಯ ಪಿಯುಸಿ ಮರು ಫಲಿತಾಂಶದಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾಳೆ. ಸಾನ್ವಿ ಸಾಧನೆ ಈಗ ರಾಜ್ಯದ ಗಮನ ಸೆಳೆದಿದೆ. ಈಕೆ ಫಲಿತಾಂಶ ಬಂದಾಗ 595 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಳು. ಇದೀಗ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.
ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಕ್ಯಾನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಜಗದೀಶ್ ರಾವ್ ಮತ್ತು ಹೊನ್ನಾವರ ಐಟಿ ಕಾಲೇಜಿನ ಪ್ರಾದ್ಯಾಪಕರಾಗಿರುವ ವಿನುತಾ ಭಟ್ ಅವರ ಪುತ್ರಿಯಾಗಿರುವ ಸಾನ್ವಿ ರಾವ್, ಪ್ರಬಾತ್‌ನಗರ ನಿವಾಸಿಯಾಗಿದ್ದಾರೆ. ಸಾನ್ವಿ ರಾವ್ ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ.. ಭರತ ನಾಟ್ಯ, ಯಕ್ಷಗಾನ, ಸಂಗೀತ, ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ಕವನ ಬರಹ, ಚೆಸ್ ಪಟುವಾಗಿ ಗುರುತಿಸಿಕೊಂಡ ಬಹುಮುಖ ಪ್ರತಿಭೆ.
ತಮ್ಮ ಯಶಸ್ಸಿನ ಬಗ್ಗೆ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ಸಾನ್ವಿ ರಾವ್, ಮೊಟ್ಟ ಮೊದಲು ನನ್ನ ಈ ಸಾಧನೆಗೆ ದೇವರನ್ನು ವಂದಿಸುತ್ತಿದ್ದೇನೆ. ಇದಕ್ಕೆ ಪ್ರೋತ್ಸಾಹ ನೀಡಿದ ಕ್ರಿಯೇಟಿವ್ ಪಿಯು ಕಾಲೇಜಿನ ಶಿಕ್ಷಕ ವೃಂದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೇ ಪ್ರತಿ ಕ್ಷಣದಲ್ಲೂ ನನ್ನೊಂದಿಗಿದ್ದು ಸದಾ ಪ್ರೋತ್ಸಾಹ ನೀಡಿದ ತಂದೆ, ತಾಯಿ, ಅಣ್ಣ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..