ಸುಬ್ರಹ್ಮಣ್ಯ ಧಾರೇಶ್ವರರು ಸದಾ ಸ್ಮರಣೀಯರು – ಕೂಜಳ್ಳಿ ಮೋಹನ ನಾಯ್ಕ

ಕುಮಟಾ, ಏಪ್ರಿಲ್‌, 27 : ಯಕ್ಷಲೋಕದ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಅವರ ಅಕಾಲಿಕ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಕೂಜಳ್ಳಿ ಮೋಹನ ನಾಯ್ಕ ಹೇಳಿದರು.

ಕುಮಟಾ ಕನ್ನಡ ಸಂಘದ ಆಶ್ರಯದಲ್ಲಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶೃದ್ಧಾಂಜಲಿ ಸಭೆಯಲ್ಲಿ ಅವರು, ಶ್ರೀಯುತರ ಸಾಧನೆ ಬಗ್ಗೆ  ಮಾತನಾಡಿದರು. ಕನ್ನಡ ಮಾಂತ್ರಿಕ, ಸ್ವರ ಸಾಮ್ರಾಟ, ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಅವರು ನಮ್ಮಿಂದ ಅಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಅವರ ಅಭಿಮಾನಿ ಬಳಗದಲ್ಲಿ ಬರಸಿಡಿಲು ಬಡಿದಂತಾಗಿದೆ.

ತನ್ನ ಹಾಡುಗಾರಿಕೆಯ ಶೈಲಿಯಲ್ಲೇ ಯಕ್ಷ ಪ್ರೇಮಿಗಳನ್ನು ಸೆಳೆಯುವ ಮಟ್ಟಕ್ಕೆ ಖ್ಯಾತರಾದರವರು. ಕಲಾವಿದನ ಚಾಣಾಕ್ಷತೆಯನ್ನು ಗುರುತಿಸಿ ಅವರಿಗೊಪ್ಪುವ ರೀತಿಯಲ್ಲಿ ಹಾಡುವ ಮೂಲಕ ಯಾವುದೇ ಕಲಾವಿದನನ್ನು ಮೇರು ನಟನಾಗಿಸುವ ಕಲೆ ಅವರಲ್ಲಿತ್ತು. ಉತ್ತರ ಕನ್ನಡದಲ್ಲಿ ಹುಟ್ಟಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಷ್ಟ್ರ, ಅಂತರಾಷ್ಟ್ರಿಯ ಮಟ್ಟದಲ್ಲಿ ಬೆಳಗುವ ಮೂಲಕ ಯಕ್ಷಲೋಕದಲ್ಲಿ ಹೊಸ ಭಾಷ್ಯ ಬರೆದಿರುವ ಅವರು ಸದಾ ಸ್ಮರಣೀಯರು.

ಅವರು ಇನ್ನಷ್ಟು ಕಾಲ ನಮ್ಮೊಂದಿಗಿದ್ದರೆ ಇನ್ನಷ್ಟು ಯಕ್ಷಗಾನ ಕಲಾವಿದರು ಹಾಗೂ ಯಕ್ಷ ಪ್ರೇಮಿಗಳ ಸೃಷ್ಟಿಯಾಗುತ್ತಿತ್ತು. ಹವ್ಯಾಸಿ ಕಲಾವಿದನಾದರೂ ಅವರೊಂದಿಗಿನ ಸಂಬಂಧ ಉತ್ತಮವಾಗಿತ್ತು. ಅಂತಹ ಕಲಾ ಚಕ್ರವರ್ತಿ ಮತ್ತೊಮ್ಮೆ ಹುಟ್ಟಿ ಬರಲಿ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದರು.

ಶಿಕ್ಷಕ ಮಂಜುನಾಥ ಗಾಂವಕರ ಮಾತನಾಡಿ, ಧಾರೇಶ್ವರ ಭಾಗವತರೆಂದೇ ಖ್ಯಾತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರರ ಅಗಲಿಕೆ ಯಕ್ಷಗಾನ ಪ್ರೇಮಿಗಳಲ್ಲಿ ನಿರಾಸೆಯ ಛಾಯೆ ಮೂಡಿಸಿದೆ. ಗೋಕರ್ಣದಲ್ಲಿ ಜನಿಸಿ ಉಡುಪಿಯಲ್ಲಿ ನೆಲೆಸಿದ್ದರೂ  ಅವರ ಉತ್ತರ ಕನ್ನಡ ಪ್ರೀತಿ ಎಂದು ಮಾಸಿರಲಿಲ್ಲ. ಯಕ್ಷಗಾನ ರಂಗ ಭೂಮಿಯಲ್ಲಿ ಭಾಗವತರ ಸ್ಥಾನಕ್ಕೆ ಗೌರವವನ್ನು ತಂದು ಕೊಟ್ಟ ಕೀರ್ತಿ ಮೊದಲಿಗೆ ಸಲ್ಲಬೇಕಾಗಿರುವುದು ದಿವಂಗತ ಕಾಳಿಂಗ ನಾವುಡರಿಗೆ. ನಂತರ ಅವರ ಸಮಕಾಲೀನರಾಗಿ ಬಾಳಿ ಬದುಕಿದ ಸುಬ್ರಹ್ಮಣ್ಯ ಧಾರೇಶ್ವರವರು ಧೀರ್ಘ ಕಾಲಿಕವಾಗಿ ಯಕ್ಷ ರಂಗದಲ್ಲಿ ವಿಜೃಂಭಿಸಿದವರು. ಯಕ್ಷಗಾನದಲ್ಲಿ ಅನೇಕ ನವ ನವೀನ ರಾಗಗಳಿನ್ನು ತಂದವರು. ಇಂತಹ ಮೇರು ವ್ಯಕ್ತಿಯತ್ವದವರು ಹಿಂದೆಯೂ ಬಂದಿಲ್ಲ. ಮುಂದೆಯೂ ಬರಲಾರರು. ಅವರ ಭಾಗತಿಕೆಯ ಶೈಲಿಯೇ ಹೊಸತನದಿಂದ ಕೂಡಿತ್ತು ಎಂದರು.

ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ, ಸದಸ್ಯರಾದ ಶಿವಯ್ಯ ಹಿಣಿ, ನಾಗಪ್ಪ ಮುಕ್ರಿ, ಶಿಕ್ಷಕ ಶಿವಾನಂದ ಪೈ ಮೊದಲಾದವರು ಉಪಸ್ಥಿತರಿದ್ರು…