ಕಾರವಾರ, ಏಪ್ರಿಲ್ 23: ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ (Tulsi Gowda) ಆರೋಗ್ಯದಲ್ಲಿ ಏರುಪೇರಾಗಿದೆ. ವಯೋಸಹಜ ಕಾಯಿಲೆ, ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದು, ಕಾರವಾರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರಾದ ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ.
30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಅವರ ಕೆಲಸವನ್ನು ಮೆಚ್ಚಿ ಭಾರತ ಸರ್ಕಾರವು 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯಾವುದೇ ಜಾತಿಯ ಮರಗಳ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯ ಹೊಂದಿರುವ ತುಳಸಿ ಗೌಡ ಅವರನ್ನು “ಎನ್ಸೈಕ್ಲೋಪೀಡಿಯಾ ಆಫ್ ದಿ ಫಾರೆಸ್ಟ್” ಎಂದು ಕೂಡ ಕರೆಯಲಾಗುತ್ತದೆ.
ಸಾಲುಮರದ ತಿಮ್ಮಕ್ಕನವರಂತೆ ಇವರೂ ಕೂಡ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಈ ಪರಿಸರ ಪ್ರೇಮ ಮತ್ತು ಅದರ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.