97 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿ ಇಂಗಳಗಿ ಅವರಿಗೆ ಸನ್ಮಾನ

ಮುಂಡಗೋಡ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 97 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿ ಇಂಗಳಗಿ ಅವರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಶಿರಸಿಯ ಸಹಾಯಕ ಆಯುಕ್ತ ದೇವರಾಜ್ ಡಿ ಮಂಗಳವಾರ ಲೀಲಾಬಾಯಿ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟದ ಅನುಭವಗಳ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ಪತ್ರಕರ್ತರ ಜೊತೆ ಮಾತನಾಡಿದ ಸಹಾಯಕ ಆಯುಕ್ತ ದೇವರಾಜ್ ಡಿ, ಸ್ವಾತಂತ್ರ್ಯ ಹೋರಾಟದ ಅನುಭವವನ್ನು ಅವರು ನಮ್ಮ ಜೊತೆಯಲ್ಲಿ ಹಂಚಿಕೊಂಡಾಗ ನಮಗೂ ಸಹ ರೋಮಾಂಚನ ಉಂಟಾಗುತ್ತದೆ. ರಾಷ್ಟ್ರಧ್ವಜವನ್ನು ಹಿಡಿದು ಸ್ವಾತಂತ್ರ್ಯ ಬೇಕೇ ಬೇಕು ಎಂದು ಅವರ ಧ್ವನಿಯಲ್ಲಿ ಕೇಳಿದಾಗ ನಮಗೆ ರೋಮಾಂಚನ ವಾಗುತ್ತದೆ. ಇಂತಹ ಮಹಾನ್ ವ್ಯಕ್ತಿಗಳಿಗೆ ಸನ್ಮಾನ ಮಾಡುವುದು ನಮಗೂ ಖುಷಿಕೊಡುತ್ತದೆ ಎಂದರು.

ಪಿಂಚಣಿ ಬರುತ್ತಿಲ್ಲ.!

ಇನ್ನು ಕಳೆದ ಎರಡು ವರ್ಷಗಳಿಂದ ನಮ್ಮ ತಾಯಿಯವರಿಗೆ ಪಿಂಚಣಿ ಬರುತ್ತಿಲ್ಲ ಎಂದು ಶಿರಸಿಯ ಸಹಾಯಕ ಆಯುಕ್ತರ ದೇವರಾಜ್ ಡಿ ಅವರಿಗೆ ಲೀಲಾಬಾಯಿಯವರ ಮಗ ಮನವಿ ಸಲ್ಲಿಸಿದರು. ಈಗಾಗಲೇ ಜಿಲ್ಲಾ ಖಜಾನೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಲೀಲಾಬಾಯಿ ಇಂಗಳಗಿ ಅವರ ಪಿಪಿಒ ಬಟವಡೆದಾರರ ಮೂಲ ಭಾಗವನ್ನು ಬ್ಯಾಂಕ್ ನವರು ಕಳೆದುಕೊಂಡಿರುವುದರಿಂದ ಪಿಂಚಣಿ ಬರುತ್ತಿಲ್ಲ ಎಂದು ಜಿಲ್ಲಾ ಖಜಾನೆಯವರು ತಿಳಿಸಿದ್ದಾರೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪಿಂಚಣಿ ಬರುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉಪವಿಭಾಗಾಧಿಕಾರಿ ದೇವರಾಜ್ ಡಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ತಹಶೀಲ್ದಾರ ಶಂಕರ್ ಗೌಡಿ ಉಪಸ್ಥಿತರಿದ್ದರು.