DK Shivakumar: ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ, ಡಿ.ಕೆ.ಶಿವಕುಮಾರ್, “ನಾನು ಎಷ್ಟು ದಿನ ಇರುತ್ತೇನೋ ಬಿಡುತ್ತೇನೋ ಗೊತ್ತಿಲ್ಲ. ಎಲ್ಲ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಕೆಲಸ ಮಾಡಬೇಕು” ಎಂದು ಹೇಳಿದರು.
ಬೆಂಗಳೂರು, ಏಪ್ರಿಲ್ 05 : “ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಬೇಕು” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಇದು ಭಾರಿ ಚರ್ಚೆಗೂ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಕೂಡ, “ನಾನು ಎಷ್ಟು ದಿನ ಇರುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಇದು ಕೂಡ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ.ಶಿವಕುಮಾರ್ ಮಾತನಾಡಿದರು. “ನಾವೆಲ್ಲ ವಿದ್ಯಾರ್ಥಿ ಘಟಕದಿಂದ ಬಂದಿದ್ದೇವೆ. ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್ ಅವರನ್ನು ನೆನಸಿಕೊಳ್ಳಬೇಕು. ಅವರದ್ದೆ ಆದ ರೀತಿಯಲ್ಲಿ ಎಲ್ಲರೂ ಪಕ್ಷಕ್ಕೆ ಕೊಡುಗೆ ಕೊಟ್ಟಿದ್ದಾರೆ. ಎಂ.ಬಿ. ಪಾಟೀಲ್ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ನಾನು ಸಹ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ನಾವೆಲ್ಲರೂ ಎನ್‌ಎಸ್‌ಯುಐನಿಂದ ಬಂದವರು. ಎನ್‌ಎಸ್‌ಯುಐನಲ್ಲಿ ನನಗೆ ಟಿಕೆಟ್ ಕೊಟ್ಟಿರಲಿಲ್ಲ. ನಾವು ಹಂಗೋ, ಹಿಂಗೋ ಬೆಳೆದುಕೊಂಡು ಬಂದಿದ್ದೇವೆ. ಆದರೆ, ನೂತನ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು. ನಾನು ಎಷ್ಟು ದಿನ ಇರುತ್ತೇನೊ ಬಿಡುತ್ತೇನೋ ಗೊತ್ತಿಲ್ಲ. ನೀವು ಕೆಲಸ ಮಾಡಬೇಕು” ಎಂದು ಸೂಚಿಸಿದರು.
“ನೂತನ ಕಾರ್ಯಾಧ್ಯಕ್ಷರು ವಿಸಿಟ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ಕೆಲಸ ಮಾಡಿಲ್ಲ ಎಂದರೆ ಚುನಾವಣೆ ನಂತರ ನೀವು ಮಾಜಿಗಳು ಆಗುತ್ತೀರಿ. ನಾನು ಎಷ್ಟು ದಿನ ಇರುತ್ತೇನೊ ಬಿಡುತ್ತೇನೋ ಗೊತ್ತಿಲ್ಲ. ನೀವು ಕೆಲಸ ಮಾಡಬೇಕು, ನಿಮಗೆ ಯಾವುದೇ ಕಾರ್ ಕೊಡುವುದಿಲ್ಲ, ರೂಮ್ ಕೊಡುವುದಿಲ್ಲ. ನಿಮ್ಮದೆ ಕಾರ್ ಬಳಸಿಕೊಂಡು ಸುತ್ತಬೇಕು” ಎಂದು ನೂತನ ಕಾರ್ಯಾಧ್ಯಕ್ಷರಿಗೆ ಉಪ ಮುಖ್ಯಮಂತ್ರಿ ಸಲಹೆ-ಸೂಚನೆ ನೀಡಿದರು. ಇದೇ ವೇಳೆ, ನೂತನ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರಿಗೆ ಎಂ.ಬಿ.ಪಾಟೀಲ್ ಅವರು ಅಧಿಕಾರ ಹಸ್ತಾಂತರ ಮಾಡಿದರು.