Lok Sabha Election 2024: ಬಹಳ ದಿನಗಳಿಂದ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ಕೊನೆಗೂ ಫೈನಲ್ ಆಗಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಮಂಡ್ಯ ಮುಖಂಡರ ಸಭೆ ಬಳಿಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ – 26 : ಪಕ್ಷದ ಉಳಿವಿವಾಗಿ ತಲೆ ಕೊಡುತ್ತಿದ್ದೇನೆ. ರಾಮನಗರ, ಚನ್ನಪಟ್ಟಣ ಜನತೆ ಅನ್ಯತಾ ಭಾವಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ (Mandya Lok Sabha constituency) ಜೆಡಿಎಸ್‌ನಿಂದ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಾವು ಇವತ್ತು ನೆಲಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿ ಲೋಪದೋಷಗಳಿದ್ದು, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನನ್ನ ಪಕ್ಷದ ಭವಿಷ್ಯ, ಪಕ್ಷದ ಹೃದಯ ಭಾಗ ಮಂಡ್ಯದ ಜನರ ಅಪೇಕ್ಷೆಯಂತೆ ಪಕ್ಷವನ್ನು ಗಟ್ಟಿಗೊಳಿಸಲು ಈ ತೀರ್ಮಾನ ಮಾಡಿದ್ದೇನೆ. ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ಬಳಿಕ ತಮ್ಮ ಸ್ಪರ್ಧೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇನೆ ಎಂದು ಹೇಳಿದರು.
ಪಕ್ಷದ ಉಳಿವಿಗಾಗಿ ನನ್ನ ತೀರ್ಮಾನ
ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇವೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತೀರ್ಮಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಮಾಡಲಾಗಿತ್ತು. ಆದರೆ, ಅವರು ಸ್ಪರ್ಧೆಗೆ ನಿರಾಕರಿಸಿದ್ದಾರೆ. ನಾನು ಈಗಾಗಲೇ ನೋವು ತಿಂದಿದ್ದೇನೆ. ಹೀಗಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಸಿ.ಎಸ್. ಪುಟ್ಟರಾಜು ಅಥವಾ ನಿಖಿಲ್‌ರನ್ನು ಕಣಕ್ಕಿಳಿಸಬೇಕು ಎಂಬ ಆಸೆ ಇತ್ತು. ಆದರೆ, ಅವರು ಅವರು ಸ್ಪರ್ಧೆ ಸಾಧ್ಯವಿಲ್ಲ ಎಂದು ಕಠಿಣ ನಿರ್ಣಯ ಮಾಡಿಕೊಂಡಿದ್ದಾರೆ. ಆ ಜಿಲ್ಲೆಯ ಜನರ ಋಣವನ್ನು ತೀರಿಸಬೇಕು. ಇಡಿ ನಾಡೇ ನನ್ನ ಕರ್ಮ ಭೂಮಿಯಾಗಿದೆ. ಹಾಗಂತ ರಾಮನಗರ ಬಿಟ್ಟು ನಾನು ಹೋಗುವುದಿಲ್ಲ. ಈ ಪಕ್ಷದ ಉಳಿವಿಗಾಗಿ ಒಂದು ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.