ಮಂಗನ ಕಾಯಿಲೆ: ಮೃತರ ಮನೆಗೆ ತೆರಳಿ ಜಿಲ್ಲಾಧಿಕಾರಿಯಿಂದ ಸಾಂತ್ವನ

 ಕಾರವಾರ: ಇತ್ತೀಚೆಗೆ ಮಂಗನ ಕಾಯಿಲೆಯಿಂದ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಸಿದ್ದಾಪುರ ತಾಲೂಕಿನ ಮಲ್ಲಾ ಜಿದ್ದಿ ಗ್ರಾಮದ ಮೃತರ ಮನೆಗೆ ಭೇಟಿ ನೀಡಿದ ತಾಲೂಕಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಸಿದ್ದಾಪುರ ತಾಲೂಕಿನ ಮಲ್ಲಾ ಜಿದ್ದಿ ಗ್ರಾಮದ ಸೀತಮ್ಮ ರಾಮಚಂದ್ರ ಮಡಿವಾಳ ಮತ್ತು ಅವರ ಮೊಮ್ಮಗಳಾದ ಪ್ರೇಕ್ಷಾ ಪರಮೇಶ್ವರ ಮಡಿವಾಳ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಲು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಸರಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸುವ ಭರವಸೆ ನೀಡಿದರು.

ಮೃತರ ಮನೆಯ ಸುತ್ತಮುತ್ತ ಪರಿಶೀÃಲನೆ ನಡೆಸಿದ ಜಿಲ್ಲಾಧಿಕಾರಿಗಳು ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆದಿರುವ ಹುಲ್ಲನ್ನು ಕತ್ತರಿಸುವಮತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪ್ರಮಾಣದಲ್ಲಿ ಕೀಟ ನಾಶಕಗಳ ಸಿಂಪಡಣೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರು ಮಂಗಗಳು ಸತ್ತಿರುವುದು ಕಂಡ ಕೂಡಲೇ ಅರಣ್ಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನಿಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಅರೋಗ್ಯ ಇಲಾಖೆಯಿಂದ ತಿಳಿಸುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ, ಶಿರಸಿ ಉಪ ವಿಭಾಗಾಧಿಕಾರಿ ಅಪರ್ಣ ರಮೇಶ್, ಸಿದ್ದಾಪುರ ತಹಶೀಲ್ದಾರ ವಿಶ್ವಜಿತ್ ಮೆಹತ, ಆರೋಗ್ಯ ಇಲಾಖೆ , ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.