ಹೊನ್ನಾವರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಆಳದ ಹೊಂಡದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ.
ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ತೆರಳುತ್ತಿದ್ದ ಅನಿಲ ತುಂಬಿದ ಟ್ಯಾಂಕರ್, ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕಾಮತ್ ಎಕ್ಸಿಕ್ಯುಟಿವ್ ಸಮೀಪದ ರಸ್ತೆಯ ಪಕ್ಕದಲ್ಲಿನ ಹೊಂಡಕ್ಕೆ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ ಹೊಡೆದ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮರಿದು ಬಿದ್ದಿದ್ದು, ವಿದ್ಯುತ್ ಕಡಿತ ಉಂಟಾಗಿತ್ತು. ಇದರಿಂದಾಗಿ ಹೊನ್ನಾವರ ಪಟ್ಟಣ ಕತ್ತಲು ಆವರಿಸಿಕೊಂಡಂತಾಗಿತ್ತು. ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಇನ್ನು ಕಾಮತ್ ಎಕ್ಸಕ್ಯೂಟಿವ್ ಹತ್ತಿರ ಕುಂಜಪ್ಪ ಆಚಾರಿ ಮನೆ ಆವರಣದಲ್ಲಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಈ ಘಟನೆಗೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೆ ಆತಂಕ ಇಲ್ಲವೆಂದು ತಿಳಿಸಿದ್ದಾರೆ.