ಹೇಯ್ ಬರ್ಕೊಳಯ್ಯ… ಶಿವಮೊಗ್ಗ ನಂದು: ಪತ್ನಿ ಪರ ಪ್ರಚಾರದಲ್ಲಿ ಡೈಲಾಗ್ ಹೊಡೆದ ಶಿವಣ್ಣ!

Shivaraj Kumar: ಗೀತಾಗೆ ರಕ್ತದಲ್ಲೇ ರಾಜಕೀಯ ಇದೆ. ಶಿವಮೊಗ್ಗದಲ್ಲಿ ಅವರನ್ನು ಗೆಲ್ಲಿಸಿ, ಆಗ ಬೇಕಾದರೆ 24 ಗಂಟೆ ಹಾಡು ಹೇಳುತ್ತೇನೆ, ಕುಣಿಯುತ್ತೇನೆ ಎಂದು ಕಾರ್ಯಕರ್ತರಿಗೆ ನಟ ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ಶಿವಮೊಗ್ಗ, ಮಾರ್ಚ್‌ 24 : ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಪತಿ, ನಟ ಶಿವರಾಜ್‌ ಕುಮಾರ್‌ (Shivaraj Kumar) ಹಾಗೂ ಸಹೋದರ ಮಧುಬಂಗಾರಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್‌ ಸೇರಿ ಪ್ರಮುಖ ಕೈನಾಯಕರು ಸಾಥ್‌ ನೀಡುತ್ತಿದ್ದಾರೆ. ಇನ್ನು ತಾಲೂಕಿನ ಸಂತೆಕಡೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಬಹಿರಂಗ ಸಮಾವೇಶದಲ್ಲಿ ನಟ ಶಿವರಾಜ್‌ ಕುಮಾರ್‌ ಅವರು ಜೋಗಯ್ಯ ಸಿನಿಮಾ ಸ್ಟೈಲಲ್ಲಿ ಡೈಲಾಗ್‌ ಹೊಡೆದು ಗಮನ ಸೆಳೆದಿದ್ದಾರೆ.

ಸಮಾವೇಶದಲ್ಲಿ ಭಾಷಣದ ವೇಳೆ ಒಂದು ಹಾಡು ಹೇಳಿ ಎಂದು ಅಭಿಮಾನಿಗಳು, ಕಾರ್ಯಕರ್ತರು ಕೂಗುತ್ತಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್‌ ಅವರು, ಇದು ಹಾಡು ಹೇಳುವ ವೇದಿಕೆ ಅಲ್ಲ, ಪತ್ನಿಯನ್ನು ಗೆಲ್ಲಿಸಿ ಆಗ ಹಾಡು ಹೇಳ್ತೇನೆ, ಬೇಕಾದರೆ 24 ಗಂಟೆ ಹಾಡು ಹೇಳುತ್ತೇನೆ, ಕುಣಿಯುತ್ತೇನೆ, ಆದರೆ, ಈಗ ಬೇಡ ಎಂದರು. ನಂತರ ಹೇ ಬರ್ಕೊಲಯ್ಯ… ಮೊದಲ್ನೇ ಪೇಜಲ್ಲೇ ಬರ್ಕೋ, ಶಿವಮೊಗ್ಗ ನಂದು… ಇಲ್ಲಿರುವವರು ಶಿವಮೊಗ್ಗ ಹುಲಿಗಳು ಎಂದು ಡೈಲಾಗ್ ಹೊಡೆಯುವ ಮೂಲಕ ಕಾರ್ಯಕರ್ತರನ್ನು ರಂಜಿಸಿದರು.

ಕ್ಷೇತ್ರದಲ್ಲಿ ಬದಲಾವಣೆ ಬೇಕು ಅಂತ ಜನ ಬಯಸಿದ್ದಾರೆ ಎಂದು ನನಗೆ ಅನಿಸಿದೆ. ನೂರಾರು ಪ್ರಶ್ನೆ ಬರುತ್ತದೆ, ಆದರೆ ಈಗ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರ ಜತೆ ಮಾತನಾಡಿ ಅರ್ಥ ಮಾಡಿಸೋದು ಬೇಡ, ಅದು ಜನರಿಗೆ ಅರ್ಥ ಆಗಬೇಕು ಅಷ್ಟೇ. ಮೊದಲು ನಂಬಿಕೆ‌ ಮುಖ್ಯ, ನಮಗೆ ಎಷ್ಟು ನಂಬಿಕೆ ಇದೆಯೋ, ಅದು ಜನರಿಗೂ ಇರಬೇಕು. ಬೇರೆ ತರ ಮಾತನಾಡೋ ಮನುಷ್ಯ ಅಲ್ಲ, ನಮ್ಮ ಫ್ಯಾಮಿಲಿ ಆ ತರ ಅಲ್ಲ. ಹೃದಯದಲ್ಲಿ ಏನು ಬರುತ್ತೆ, ಅದು ಬಾಯಲ್ಲಿ ಬರುತ್ತೆ, ನಾವು ಹೃದಯದಿಂದ ಮಾತನಾಡುವವರು ಎಂದು ಹೇಳಿದರು.

ನಾವು ಜನರಿಗೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗೀತಕ್ಕ ಜತೆ ಮಾತನಾಡಿದ್ದೇನೆ. ನಟನೆ ಮಾಡಿದರೆ ರಾಜಕೀಯ ಗೊತ್ತಿಲ್ಲ ಅಂತ ಅಲ್ಲ, 40 ವರ್ಷ ಆಯ್ತು, ಮತ ಹಾಕುತ್ತಿದ್ದೇನೆ. ರಾಜಕೀಯ ಗೊತ್ತಿದೆ, ರಾಜಕೀಯಕ್ಕೆ ಬರಬೇಕು ಅಂತ ಅಲ್ಲ. ಗೀತಾ ಬಂದಿದ್ದಾರೆ, ಅವರಿಗೆ ನನ್ನ ಸಪೋರ್ಟ್ ಅಷ್ಟೇ. ಒಳ್ಳೆಯ ರೀತಿಯಲ್ಲಿ ರಾಜಕೀಯ ಬರಲಿ ಅಂತ ಸಪೋರ್ಟ್ ಮಾಡಿದ್ದೀನಿ ಅಷ್ಟೇ. ಯಾವ ಪಾಲಿಟಿಕ್ಸ್ ಡಿಫರೆಂಟ್ ಅಲ್ಲ, ಇಸ್ ನಾಟ್ ಎ ಮೈಂಡ್ ಗೇಮ್, ಪಾಲಿಟಿಕ್ಸ್ ಇಸ್ ಹಾರ್ಟ್ ಗೇಮ್. ಹೃದಯ ಬೇಕು, ಹೃದಯವಂತಿಕೆ ಬೇಕು ಎಂದರು.

ಗೀತಾಗೆ ರಕ್ತದಲ್ಲೇ ರಾಜಕೀಯ ಇದೆ
ನಮ್ಮ‌ ಮನೆಗೆ ಬರುವುದಕ್ಕಿಂತ ಮುಂಚೆ ಗೀತಾ ನಿಮ್ಮ ಊರಿನವರು, ಬಂಗಾರಪ್ಪ ಮಗಳು. ಗೀತಾಗೆ ಒಂದು ಅವಕಾಶ ಕೊಟ್ಟು, ನೋಡಿ. ಅವಾಗ ಏನು ಮಾಡ್ತೀವಿ ಎಂಬುದನ್ನು ನೋಡಿ. ಪ್ರಾಕ್ಟಿಕಲ್ ಆಗಿ ಕೆಲಸ ಮಾಡಬೇಕು, ಅನುಭವ ಮುಖ್ಯ ಅಲ್ಲ. ಗೀತಾಗೆ ರಕ್ತದಲ್ಲೇ ರಾಜಕೀಯ ಇದೆ, ನನಗೆ ಅದು ಇಲ್ಲ ಎಂದು ಹೇಳಿದರು.

ಸಾವಿರ ಜನ ಏನು ಬೇಕಾದರೂ ಹೇಳಬಹುದು, ಜನ ಏನ್ ಹೇಳುವರೋ ಅದನ್ನು ನಾವು ಮಾಡಬೇಕು. ತವರು ಮನೆಗೆ ಬಂದಾಗ ಏನಾದರೂ ಹುಡುಗೊರೆ ಕೊಡುತ್ತಾರೆ, ಗೀತಾ ತವರು ಮನೆಗೆ ಬಂದಿದ್ದಾರೆ. ನೀವು ಯಾಕೆ ಅವರನ್ನು ಸಂಸದರನ್ನಾಗಿ ಮಾಡಬಾರದು ಎಂದು ಹೇಳಿದರು.