Video : ಮೆಟ್ರೋದಲ್ಲೇ ಹೋಳಿ ಆಚರಿಸಿದ ಯುವತಿಯರು.. ಉಗಿದು ಉಪ್ಪಿನಕಾಯಿ ಹಾಕಿದ ಜನ

Metro Viral Video: ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿಯರಿಬ್ಬರು ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಆಚರಿಸಿದ್ದಾರೆ. ಇದರ ಜತೆಗೆ ಇಬ್ಬರು ತೋರಿದ ವರ್ತನೆಯು ಜಾಲತಾಣಗಳಲ್ಲಿ ಜನ ರೊಚ್ಚಿಗೇಳುವಂತೆ ಮಾಡಿದೆ. ಆ ವೈರಲ್‌ ವಿಡಿಯೊ ನೀವೂ ನೋಡಿ.

ನವದೆಹಲಿ, ಮಾರ್ಚ್‌ 24 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ರೈಲುಗಳು (Delhi Metro) ಅಸಭ್ಯ ವರ್ತನೆ, ಜಗಳ, ಯುವ ಪ್ರೇಮಿಗಳು ರೊಮ್ಯಾನ್ಸ್‌ ಮಾಡುವ ತಾಣಗಳಾಗಿ ಬದಲಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿ ಮೆಟ್ರೋದಲ್ಲಿಯೇ ಪರಸ್ಪರ ಬಣ್ಣ (Holi Inside Metro) ಹಚ್ಚಿಕೊಂಡು, ಮುದ್ದಾಡಿಕೊಂಡು, ರೊಮ್ಯಾಂಟಿಕ್‌ ಆಗಿ ಹೋಳಿ ಆಚರಿಸಿದ ವಿಡಿಯೊ (Metro Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಜನರಿಂದ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.

ಹೌದು, ಇಬ್ಬರು ಯುವತಿಯರು ದೆಹಲಿ ಮೆಟ್ರೋ ಹತ್ತಿದ್ದಾರೆ. ರೈಲು ಚಲಿಸುತ್ತಲೇ ಕೆಳಗೆ ಕುಳಿತ ಅವರು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದಾರೆ. ಆಕೆಯ ಕೆನ್ನೆಗೆ ಈಕೆ, ಈಕೆಯ ಕೆನ್ನೆಗೆ ಆಕೆ ಬಣ್ಣ ಹಚ್ಚುವುದು, ಇಬ್ಬರೂ ಮಲಗಿ ರೊಮ್ಯಾನ್ಸ್‌ ಮಾಡುವುದು, ಮುದ್ದಾಡುವುದು, ಮುತ್ತು ಕೊಡುವುದು ಸೇರಿ ಬಹಿರಂಗವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹುಚ್ಚಾಟವನ್ನು ಕಂಡ ಪ್ರಯಾಣಿಕರು, ಮನಸ್ಸಲ್ಲೇ ಹಿಡಿ ಶಾಪ ಹಾಕಿದ್ದಾರೆ. ಆದರೆ, ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ಅವರಿಗೆ ತೊಂದರೆಯಾಗುತ್ತದೆಯೋ ಎಂಬುದರ ಪರಿವೇ ಇಲ್ಲದೆ ಇಬ್ಬರು ಯುವತಿಯರು ಹುಚ್ಚಾಟ ಮಾಡಿದ್ದಾರೆ.

ಉಗಿದು ಉಪ್ಪಿನಕಾಯಿ ಹಾಕಿದ ಜನ
ಇಬ್ಬರು ಯುವತಿಯರು ರೈಲಿನಲ್ಲಿಯೇ ಹೋಳಿ ಆಚರಿಸಿದ, ಅಸಭ್ಯವಾಗಿ ವರ್ತಿಸಿ ವಿಡಿಯೊ ವೈರಲ್‌ ಆಗುತ್ತಲೇ ಜನ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. “ಇದೇನು ಮೆಟ್ರೋ ಎಂದುಕೊಂಡಿದ್ದೀರೋ, ಪಾರ್ಕ್‌ ಎಂದುಕೊಂಡಿದ್ದೀರೋ? ಸಂಸ್ಕಾರ ಇಲ್ಲದ ಜನ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ದೆಹಲಿ ಮೆಟ್ರೋದಲ್ಲಿ ಉಗಿದರೆ 200 ರೂ., ರೈಲಿನ ಮೇಲೆ ಕುಳಿತರೆ 50 ರೂ., ಅಲಾರಾಂ ದುರ್ಬಳಕೆ ಮಾಡಿಕೊಂಡರೆ 500 ರೂ. ದಂಡ ವಿಧಿಸಲಾಗುತ್ತದೆ. ಆದರೆ, ಇಂತಹ ಹುಚ್ಚಾಟಗಳಿಗೆ ಏಕೆ ದಂಡ ವಿಧಿಸಲ್ಲ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇವರಿಬ್ಬರಿಗೆ ಕನಿಷ್ಠ 25 ಸಾವಿರ ರೂ. ದಂಡ ವಿಧಿಸಬೇಕು”, “ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌, ಜಾಲತಾಣಗಳ ಹುಚ್ಚು ಇವರನ್ನು ಹೀಗೆ ಮಾಡಿಸುತ್ತಿದೆ”, “ಯುವಕ-ಯುವತಿಯರಿಗೆ ಉದ್ಯೋಗ ಸಿಕ್ಕಿದ್ದರೆ ಹೀಗೇಕೆ ಮಾಡುತ್ತಿದ್ದರು?”, “ಉಚಿತ ಮನರಂಜನೆ, ನೋಡಿ, ಎಂಜಾಯ್‌ ಮಾಡಿ” ಎಂಬುದು ಸೇರಿ ಹತ್ತಾರು ರೀತಿಯಲ್ಲಿ ಜನ ಪ್ರತಿಕ್ರಿಯಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದೆಹಲಿ ಮೆಟ್ರೋದಲ್ಲಿ ಯುವಕ-ಯುವತಿ ರೊಮ್ಯಾನ್ಸ್‌ ಮಾಡಿದ್ದರು. ಇನ್ನೂ ಒಂದಷ್ಟು ಮಹಿಳೆಯರು ಜಗಳ ಆಡಿದ್ದರು. ಯುವತಿಯೊಬ್ಬಳು ಹೇರ್‌ ಸ್ಟ್ರೇಟನಿಂಗ್‌ ಮಾಡಿಕೊಂಡಿದ್ದಳು. ಆದಾಗ್ಯೂ, ದೆಹಲಿ ಮೆಟ್ರೋದಲ್ಲಿ ರೀಲ್ಸ್‌ ಮಾಡುವುದು ನಿಷೇಧವಾಗಿದೆ.