ಗುಡಿಸುತ್ತಿದ್ದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು ಅಕ್ಕಿ ಮೂಟೆ; ಮುಂದೇನಾಯ್ತು ನೀವೇ ನೋಡಿ

Viral Video: ಮುಂಬೈಯ ಎಪಿಎಂಸಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಮೇಲೆ ಅಕ್ಕಿ ತುಂಬಿದ್ದ ಗೋಣಿ ಚೀಲಗಳು ಕುಸಿದ್ದ ಬಿದ್ದ ವಿಡಿಯೊ ವೈರಲ್‌ ಆಗಿದೆ.

ಮುಂಬೈ ಮಾರ್ಚ್‌ 17 : ಸಮಸ್ಯೆ ಯಾವಾಗ, ಯಾವ ರೀತಿ ಎದುರಾಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಕ್ಷಣವೂ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಹಿರಿಯರು. ಇದಕ್ಕೆ ಸಾಕ್ಷಿ ಎಂಬಂತೆ ಉತ್ತಮ ಉದಾಹರಣೆ ಇಲ್ಲಿದೆ. ಮುಂಬೈಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (Agricultural Produce Market Committee)ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಮೇಲೆ ಅಕ್ಕಿ ಮೂಟೆಗಳು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸದ್ಯ ವೈರಲ್‌ ಆಗಿದೆ (Viral Video).

ನವಿ ಮುಂಬೈಯ ವಾಶಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಿಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಸಮೀಪದಲ್ಲಿದ್ದವರು ಸ್ಪಂದಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ವಿಡಿಯೊದಲ್ಲೇನಿದೆ?
ಎಪಿಎಂಸಿ ಗೋಡೌನ್‌ಲ್ಲಿ ಮಹಿಳೆಯೊಬ್ಬರು ನೆಲ ಸ್ವಚ್ಛಗೊಳಿಸುತ್ತಿದ್ದರು. ಎರಡು ಕಡೆ ಅಕ್ಕಿ, ಧಾನ್ಯಗಳ ಗೋಣಿ ಚೀಲಗಳನ್ನು ಪೇರಿಸಿ ಇಡಲಾಗಿತ್ತು. ಇದ್ದಕ್ಕಿದ್ದಂತೆ ಮಹಿಳೆಯ ಎರಡೂ ಕಡೆ ಪೇರಿಸಿಟ್ಟ ಗೋಣಿ ಚೀಲಗಳು ಕುಸಿದು ಬಿದ್ದವು. ಅಂದಾಜು 30-40 ಗೋಣಿ ಚೀಲಗಳು ಮಹಿಳೆ ಮೇಲೆ ಬಿದ್ದವು. ಕೂಡಲೇ ಅಲ್ಲಿ ಇದ್ದವರು ಧಾವಿಸಿ ಬಂದು ಹೆಚ್ಚಿನ ಅನಾಹುತದಿಂದ ಮಹಿಳೆಯನ್ನು ಕಾಪಾಡಿದ್ದಾರೆ. ತ್ವರಿತವಾಗಿ ಸ್ಪಂದಿಸಿ ಚೀಲಗಳನ್ನು ಬದಿಗೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತ್ವರಿತವಾಗಿ ಸಾಹಾಯಕ್ಕೆ ಧಾವಿಸಿದ ಇತರ ಸಿಬಂದಿಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಸಣ್ಣ ಪುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.