IPL 2024: 5785 ದಿನಗಳ ಬಳಿಕವೂ ಹಳೆಯ ಅಧ್ಯಾಯ ಮುಂದುವರೆಸಿದ RCB

IPL 2024: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಎಸ್​ಕೆ ಆಘಾತ ನೀಡಿದೆ. ಮೊದಲ ಪಂದ್ಯದಲ್ಲೇ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ಸೂಪರ್​ ಆಗಿಯೇ ಐಪಿಎಲ್ ಅಭಿಯಾನ ಆರಂಭಿಸಿದೆ.

ಇದು RCBಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದೊಂದಿಗೆ ಐಪಿಎಲ್ (IPL 2024) ಅಭಿಯಾನ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5785 ದಿನಗಳ ಬಳಿಕವೂ ಹಳೆಯ ಅಧ್ಯಾಯವನ್ನು ಮುಂದುವರೆಸಿದೆ. ಅಂದರೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್​ಕೆ ವಿರುದ್ಧ ಮತ್ತೊಮ್ಮೆ ಆರ್​ಸಿಬಿ ಮುಗ್ಗರಿಸಿದೆ.

ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.

174 ರನ್​ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್​ ಬಾರಿಸಿ ನಿರಾಯಾಸವಾಗಿ ಗೆಲುವು ದಾಖಲಿಸಿತು. ಈ ಜಯದೊಂದಿಗೆ ತವರಿನಲ್ಲಿ ಆರ್​ಸಿಬಿ ವಿರುದ್ಧದ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಅಂದರೆ ಆರ್​ಸಿಬಿ ತಂಡವು ಚೆನ್ನೈನಲ್ಲಿ ಗೆಲುವು ದಾಖಲಿಸಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ. 2008 ರಲ್ಲಿ ಮೊದಲ ಜಯ ಸಾಧಿಸಿದ ಬಳಿಕ ಸಿಎಸ್​ಕೆ ವಿರುದ್ಧ ಚೆಪಾಕ್ (ಎಂಎ ಚಿದಂಬರಂ ಸ್ಟೇಡಿಯಂ) ಮೈದಾನದಲ್ಲಿ ಗೆಲುವು ಕಂಡಿಲ್ಲ.

2008 ರಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 112 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ 14 ರನ್​ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಆರ್​ಸಿಬಿ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್​ಕೆ ವಿರುದ್ಧ ಗೆಲುವು ದಾಖಲಿಸಿಲ್ಲ.

ಇಂಟ್ರೆಸ್ಟಿಂಗ್ ವಿಷಯ ಎಂದರೆ, ಆರ್​ಸಿಬಿ ಚೆಪಾಕ್​ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದಾಗ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರಲಿಲ್ಲ. ಸಿಎಸ್​ಕೆ ತಂಡದ ಈಗಿನ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿದ್ದರು. ಇದೀಗ ಕಾಲವೇ ಉರುಳಿದಿದೆ. ಆದರೆ ಹೊಸ ಅಧ್ಯಾಯದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ಆರ್​ಸಿಬಿ 16 ವರ್ಷಗಳ ಹಳೆಯ ಅಧ್ಯಾಯವನ್ನೇ ಮುಂದುವರೆಸಿದೆ.