ಕುಂದಾಪುರ: ಅರಬ್ಬಿ ಸಮುದ್ರದಲ್ಲಿ ಬೋಟ್​​ನಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ 8 ಮೀನುಗಾರರ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಬೋಟ್ ಒಳಗೆ ನೀರು ಬರಲಾರಂಭವಾಗಿ ಅಪಾಯಕ್ಕೆ ಸಿಲುಕಿದ 8 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್ ಅಪಾಯಕ್ಕೆ ಸಿಲುಕಿತ್ತು.

ಉಡುಪಿ, ಮಾರ್ಚ್ 22: ಬೋಟ್​​ನಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ 8 ಮಂದಿ ಮೀನುಗಾರರನ್ನು (Fishermen) ರಕ್ಷಣೆ ಉಡುಪಿ (Udupi) ಜಿಲ್ಲೆಯ ಕುಂದಾಪುರದ (Kundapura) ಅರಬ್ಬಿ ಸಮುದ್ರದಲ್ಲಿ (Arabian Sea) ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಬೋಟ್​ ಹಾನಿಗೀಡಾಗಿ ಅಪಾಯಕ್ಕೆ ಸಿಲುಕಿದ್ದರು. ಕಲ್ಮಾಡಿಯ ಪ್ಯಾರು ಎಸ್. ಎಂಬವರ ಒಡೆತನದ ಬೋಟ್​ ಅಪಾಯಕ್ಕೆ ಸಿಲುಕಿತ್ತು. ಬೋಟ್​​ನ ತಳಭಾಗ ಒಡೆದು ನೀರು ಒಳನುಗ್ಗಲಾರಂಭಿಸಿತ್ತು.

ಅಪಾಯದ ಅರಿವಾಗುತ್ತಿದ್ದಂತೆಯೇ ಬೋಟ್​ನಲ್ಲಿದ್ದ ಮೀನುಗಾರರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಪೊಲೀಸರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಆ ಸಂದರ್ಭ ಸಮುದ್ರದಲ್ಲಿ ಗಸ್ತಿನಲ್ಲಿದ್ದ ಎರಡು ನೌಕೆಗಳು ಬೋಟ್​ ಬಳಿ ತೆರಳಿದವು. ಅದರಲ್ಲಿದ್ದ ಸಿಬ್ಬಂದಿ ಮೀನುಗಾರರ ರಕ್ಷಣೆ ಮಾಡಿದ್ದಾರೆ. ಜತೆಗೆ, ಅಪಾಯಕ್ಕೆ ಸಿಲುಕಿದ್ದ ಬೋಟ್ ಅನ್ನು ಮೀನುಗಾರಿಕಾ ಬಂದರಿಗೆ ರವಾನಿಸಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ್ದ ಬೋಟ್ ಮುಳುಗಡೆಯಾದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿತ್ತು. ಅದರಲ್ಲಿದ್ದ ಸಿಬ್ಬಂದಿ ಅನ್ನ, ನೀರಿಲ್ಲದೇ ಸಮುದ್ರದಲ್ಲಿ ಮೂರು ದಿನ ಕಳೆಯುವಂತಾಗಿತ್ತು. ನಂತರ ಅವರನ್ನು ರಕ್ಷಣೆ ಮಾಡಲಾಗಿತ್ತು.

ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ತೆರಳುವ ಬೋಟ್​ಗಳು ಅಪಾಯಕ್ಕೆ ಸಿಲುಕಿದ ಹಲವು ಘಟನೆಗಳು ಹಿಂದೆಯೂ ಸಂಭವಿಸಿವೆ. ಇಂತಹ ಸಂದರ್ಭಗಳಲ್ಲಿ ಮೀನುಗಾರರ ರಕ್ಷಣೆಗಾಗಿ ಬೋಟ್ ಆಂಬುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಇತ್ತೀಚೆಗೆ ಭರವಸೆ ನೀಡಿತ್ತು.