IPL 2024: ಸಿಎಸ್ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.
ಚೆನ್ನೈ, ಮಾರ್ಚ್ 21 : 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಧೋನಿ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.
ವಾಸ್ತವವಾಗಿ ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು. ಆದರೆ ಲೀಗ್ ಆರಂಭಕ್ಕೂ ಮುನ್ನ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವೆ ಎಂದಿದ್ದ ಧೋನಿ, ಇದೀಗ ನಾಯಕತ್ವವನ್ನು ತ್ಯಜಿಸಿ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಿಲಿದ್ದಾರೆ.
ವಾಸ್ತವವಾಗಿ ಪ್ರತಿ ಸೀಸನ್‌ನಂತೆ, ಐಪಿಎಲ್ ಪ್ರಾರಂಭವಾಗುವ ಮೊದಲು, ಎಲ್ಲಾ ತಂಡಗಳ ನಾಯಕರು ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡುತ್ತಾರೆ. ಈ ಸೀಸನ್ನಲ್ಲಿಯೂ ಫೋಟೋ ಶೂಟ್ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲಾ 10 ತಂಡಗಳ ನಾಯಕರು ಫೋಟೋಶೂಟ್‌ಗೆ ಬಂದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ಬದಲಿಗೆ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಆವೃತ್ತಿಯಿಂದ ಗಾಯಕ್ವಾಡ್ ತಂಡದ ನಾಯಕರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಅಲ್ಲದೆ ಈ ವಿಚಾರವನ್ನು ಸಿಎಸ್ಕೆ ಫ್ರಾಂಚೈಸಿ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮಾಹಿತಿ ನೀಡಿದೆ.