ಮೋದಿ ಪ್ರಚಾರದ ಅಬ್ಬರ ತಗ್ಗಿಸಲು ರೂಟ್ ಮ್ಯಾಪ್ ಸಿದ್ಧಪಡಿಸಿದ ಕಾಂಗ್ರೆಸ್: ‘ಕೈ’ ತಂತ್ರವೇನು ನೋಡಿ!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಭರ್ಜರಿಯಾಗಿ ಪ್ರಚಾರ ಅಭಿಯಾನ ಶುರು ಮಾಡಿದ್ದಾರೆ. ಈ ಮಧ್ಯೆ, ಮೋದಿ ಪ್ರಚಾರದ ಅಬ್ಬರ ತಗ್ಗಿಸಲು ಕಾಂಗ್ರೆಸ್ ಪ್ರತಿಯೋಜನೆ ರೂಪಿಸಿದೆ. ಪ್ರಚಾರದ ನಿಟ್ಟಿನಲ್ಲಿ ಕಾಂಗ್ರೆಸ್ ವಿಭಿನ್ನ ತಂತ್ರಗಾರಿಕೆ ಹೇಗಿದೆ? ಇದರ ವಿಶೇಷವೇನು? ಇಲ್ಲಿದೆ ನೋಡಿ ವಿವರ.

ಬೆಂಗಳೂರು, ಮಾರ್ಚ್​ 20: ಲೋಕಸಭೆ ಚುನಾವಣೆಗೆ (Lok Sabha Election) ಅಭ್ಯರ್ಥಿಗಳ ಪಟ್ಟಿ​ ಜೊತೆಗೆ ರಾಜ್ಯದಲ್ಲಿ ಪ್ರಚಾರದ ತಂತ್ರವನ್ನೂ ಬದಲಿಸಲು ಕಾಂಗ್ರೆಸ್ (Congress) ಭರ್ಜರಿ ಸಿದ್ಧತೆ ಮಾಡಿದೆ. ಈಗಾಗಲೇ ಪ್ರಧಾನಿ ಮೋದಿ ಎರಡು ಬಾರಿ ಕರ್ನಾಟಕ್ಕೆ (Karnataka) ಬಂದು ಅಬ್ಬರದ ಪ್ರಚಾರ ಮಾಡಿ ಹೋಗಿದ್ದಾರೆ. ಇದೀಗ ಪ್ರಧಾನಿ ಅಬ್ಬರ ತಗ್ಗಿಸಲು ಕಾಂಗ್ರೆಸ್ ಹೊಸ ತಂತ್ರ ಹೆಣೆದಿದೆ. ಮೋದಿ ಗೆಲುವಿನ ಓಟಕ್ಕೆ ತಡೆಯೊಡ್ಡಬೇಕು. ಮತದಾರರು ಬಿಜೆಪಿ ಕಡೆ ವಾಲದಂತೆ ತಡೆಯಬೇಕು ಎಂಬ ಗುರಿ ಇಟ್ಟುಕೊಂಡು ಕಾಂಗ್ರೆಸ್ ಹೊಸ ತಂತ್ರ ರೂಪಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್, ಮೋದಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ತಯಾರಿ ಮಾಡಿದೆ.

ಈಗಾಗಲೇ ಎರಡೆರಡು ಜೋಡೋ ಯಾತ್ರೆಗಳ ಮೂಲಕ ಲೋಕಸಭೆ ರಣರಂಗದಲ್ಲಿ ರಾಹುಲ್ ಗಾಂಧಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರಿಂದಲೇ ಪ್ರಚಾರ ಆರಂಭಿಸಲು ಕಾಂಗ್ರೆಸ್ ಚಿಂತನೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ದೇಶಕ್ಕೆ ಸಂದೇಶ ಕೊಟ್ಟ ರೀತಿ, ಕರ್ನಾಟಕದಿಂದ ಹೊಸ ಸಂದೇಶ ರವಾನೆ ಮಾಡುವ ಲೆಕ್ಕಾಚಾರ ಕೈ ನಾಯಕರದ್ದಾಗಿದೆ. ಈ ಕುರಿತು ಸಿಎಂ ಮತ್ತು ಡಿಸಿಎಂ ಜೊತೆ ಬಸವರಾಜ್ ರಾಯರೆಡ್ಡಿ, ಜಿಸಿ, ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿದ್ದಾರೆ.

ಪ್ರಚಾರಕ್ಕೆ ‘ಕೈ’ ರೂಟ್ ಮ್ಯಾಪ್!
ಕರ್ನಾಟಕದಲ್ಲಿ ರಾಹುಲ್ ಗಾಂಧಿ ಕರೆಸಿ ಪ್ರಚಾರ ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಲೋಕಸಭೆ ಪ್ರಚಾರ ಕಾರ್ಯ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಯಲಿದ್ದು, ಬಸವಕಲ್ಯಾಣ ಅಥವಾ ಕುರುಡುಮಲೆ ದೇವಸ್ಥಾನದಿಂದ ಪ್ರಚಾರಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಈ ಪ್ರಚಾರಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡುವ ಮೂಲಕ ಸಂದೇಶ ರವಾನಿಸಲು ಸಿದ್ಧತೆ ಮಾಡಲಾಗಿದೆ.

ಬಸವಣ್ಣನ ನಾಡಿನಿಂದಲೇ ಲೋಕ ಸಮರದ ರಣ ಕಹಳೆ‌ ಮೊಳಗಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಆ ಮೂಲಕ ಮತ್ತೊಮ್ಮೆ ಲಿಂಗಾಯತ ಮತ ಬ್ಯಾಂಕ್ ಸೆಳೆಯುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ. ಎರಡು ಹಂತದಲ್ಲಿ ಚುನಾವಣೆ ಇರೋದ್ರಿಂದ ಕುರುಡುಮಲೆ ದೇವಸ್ಥಾನದಿಂದಲೂ ಪ್ರಚಾರ ನಡೆಸುವ ಪ್ರಸ್ತಾಪ ಹಾಕಿಕೊಳ್ಳಲಾಗಿದೆ.

ಪ್ರಚಾರದ ಸಿದ್ಧತೆ ಪ್ರಕಾರ ಯಾವ ಕ್ಷೇತ್ರದಲ್ಲಿ ಒಗ್ಗಟಿನ ಪ್ರಚಾರದ ಅಗತ್ಯವಿದೆಯೋ ಅಂತಹ ಕ್ಷೇತ್ರಗಳಲ್ಲಿ ಸಿಎಂ, ಡಿಸಿಎಂ ಒಟ್ಟಾಗಿ ಪ್ರಚಾರ ಮಾಡುವುದು, ಉಳಿದ ಕಡೆ ಪ್ರತ್ಯೇಕವಾಗಿ ಪ್ರಚಾರ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ವಿಧಾನಸಭೆ ಕ್ಷೇತ್ರಗಳು, ಲೋಕಸಭೆ ಕ್ಷೇತ್ರಗಳನ್ನ ಒಟ್ಟಿಗೆ ಸೇರಿಸಿ ಪ್ರಚಾರಕ್ಕೂ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಆ ಮೂಲಕ ಅಬ್ಬರದ ಪ್ರಚಾರ ಮಾಡಿ ಸರ್ಕಾರದ ಸಾಧನೆಗಳು ಹೇಳುವುದು, ರಾಜ್ಯ ಸರ್ಕಾರ ಸಾಧನೆಗಳು, ಕೇಂದ್ರ ಸರ್ಕಾರ ವೈಫಲ್ಯಗಳು ಪ್ರಚಾರ ಮಾಡುವ ತಂತ್ರಗಾರಿಕೆ ಹಾಕಿಕೊಳ್ಳಲಾಗಿದೆ.

ಮಂಡ್ಯದಲ್ಲಿ ಪ್ರಚಾರ ತಂತ್ರ ಬದಲಿಸಿದ ಕಾಂಗ್ರೆಸ್
ಈ ಬಾರಿಯ ಲೋಕಸಭಾ ಕ್ಷೇತ್ರದಲ್ಲಿ ಮಂಡ್ಯ ಕ್ಷೇತ್ರವೂ ಹೈವೋಲ್ಟೇಜ್ ಆಗುತ್ತಿದೆ. ಯಾಕೆಂದರೆ, ಮೂಲಗಳ ಪ್ರಕಾರ ಮಂಡ್ಯದಿಂದ ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಇಲ್ಲಿ ಪ್ರಚಾರದ ತಂತ್ರ ಬದಲಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಭಾವನಾತ್ಮಕ ವಿಚಾರವನ್ನ ಎತ್ತಿಕೊಂಡಿದ್ದಾರೆ. ಚಂದ್ರು ಮಂಡ್ಯದಲ್ಲೇ ಮನೆ ಖರೀದಿಸಿದ್ದಾರೆ. ಯಾಕಂದ್ರೆ, ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾ, ಅಂದು ಸ್ಪರ್ಧೆ ಮಾಡಿ ಸೋತಿದ್ದ ನಿಖಿಲ್ ಮಂಡ್ಯದಲ್ಲಿ ಮನೆ ಮಾಡೋದಾಗಿ ಹೇಳಿದ್ರು. ಆದರೆ ಇಬ್ಬರೂ ಅದನ್ನ ಮಾಡಿರಲಿಲ್ಲ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಚುನಾವಣೆಗೂ ಮುನ್ನವೇ ಮನೆ ಖರೀದಿ ಮಾಡಿದ್ದಾರೆ. ಇಂದು ಸ್ಟಾರ್ ಚಂದ್ರು ನೂತನ ಮನೆ ಹಾಗೂ ಕಚೇರಿ ಉದ್ಘಾಟನೆ ಆಗಿದ್ದು, ಇದರಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡೀಸಿದ್ದೇಗೌಡ, ಗಣಿಗ ರವಿ, ಉದಯ್ ಹಲವರು ಭಾಗಿಯಾಗಿದ್ದಾರೆ.