ಅಂಕೋಲಾ : ಪುನೀತ್ ರಾಜಕುಮಾರ ಜನ್ಮದಿನದ ನಿಮಿತ್ತ ಭಾನುವಾರ ತಾಲೂಕಿನ ಮಂಜಗುಣಿಯಲ್ಲಿ ಪುನೀತ್ ಅವರ ಪುತ್ಥಳಿಗೆ ನಿವೃತ್ತ ಸಾರಿಗೆ ಇಲಾಖೆಯ ನಿರ್ವಾಹಕ ಗಣಪತಿ ಏಣು ನಾಯ್ಕ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರಾತ್ರಿ ಮೊಂಬತ್ತಿ ಹಚ್ಚಿ ಸಿಹಿ ವಿತರಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳಲಾಯಿತು.
ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ ಮಾತನಾಡಿ, ಪುನೀತ ರಾಜಕುಮಾರ ಮಾಡಿದ ಕೆಲಸ ಕಾರ್ಯಗಳು ಅವರನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಾಗಿದೆ. ದೇವರ ಫೋಟೋಗಳನ್ನು ಮಾರಾಟಮಾಡುವ ಅಂಗಡಿಗಳಲ್ಲಿ ಪುನೀತ ರಾಜಕುಮಾರ ಫೋಟೋಗಳು ಲಭಿಸುತ್ತವೆ ಎಂದರೆ ಅವರ ಕೊಡುಗೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಇದರಿಂದ ಸಾಭೀತಾಗುತ್ತದೆ ಎಂದರು.
ಜಿ.ಆರ್.ತಾಂಡೇಲ ಮಾತನಾಡಿ, ಪುನೀತ ರಾಜಕುಮಾರ ಅವರ ಸಾಮಾಜಿಕ ಕೊಡುಗೆ ಅತ್ಯಂತ ಮೌಲ್ಯಯುತವಾಗಿತ್ತು. ಅನಾಥಾಶ್ರಮ, ವೃದ್ಧಾಶ್ರಮ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ನಾನಾ ಸಮಾಜ ಸೇವೆಯನ್ನು ಗೌಪ್ಯವಾಗಿ ಮಾಡಿದರು. ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಜನಮಾನಸದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದರು.
ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಎಂ. ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನೀತ ರಾಜಕುಮಾರ ಅವರ ಪುತ್ಥಳಿಯನ್ನು ಪ್ರಥಮ ಬಾರಿಗೆ ನಮ್ಮ ಊರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಕೀರ್ತಿ ನಮ್ಮ ಊರಿಗೆ ಸಲ್ಲುತ್ತದೆ. ಆಯಾ ಸಮಯದಲ್ಲಿ ಪುನೀತ ಪುತ್ಥಳಿಗೆ ಸಲ್ಲಿಸುವ ಕಾರ್ಯ ನಿರಂತರವಾಗಿ ಹಮ್ಮಿಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ, ಪದಾಧಿಕಾರಿಗಳಾದ ಸಂತೋಷ ವಿ. ನಾಯ್ಕ, ರವಿ ಎನ್. ನಾಯ್ಕ, ಅನಿಲ ಎಂ. ನಾಯ್ಕ, ಅನಿಲ ಜೆ. ನಾಯ್ಕ, ವಿವೇಕ ನಾಯ್ಕ, ಗಣೇಶ ವಿ. ನಾಯ್ಕ,, ಸಚಿನ ಎನ್. ನಾಯ್ಕ, ರಾಘವೇಂದ್ರ ಎನ್. ನಾಯ್ಕ ಸೇರಿದಂತೆ ಇತರರಿದ್ದರು.