ಕಾರವಾರದಲ್ಲಿ ಅದ್ದೂರಿ ಖಾಪ್ರಿ ದೇವರ ಜಾತ್ರೆ; ಹರಕೆ ಈಡೇರಿಸಿದ ದೇವರಿಗೆ ಭಕ್ತರಿಂದ ಸಾರಾಯಿ, ಸಿಗರೇಟು ಕೊಡುಗೆ

ಸಾಮಾನ್ಯವಾಗಿ ಜಾತ್ರೆ ಅಂದರೆ ದೇವರಿಗೆ ಹೂ, ಹಣ್ಣು ಕಾಯಿಯ ಜೊತೆಗೆ ಸಿಹಿ ತಿನಿಸು ಪ್ರಸಾದವಾಗಿ ನೀಡುವುದು ಸಹಜ. ಆದ್ರೆ, ಕಾರವಾರದ ಗೋವಾ ಗಡಿಯಲ್ಲಿ ನಡೆಯುವ ಈ ಜಾತ್ರೆ ಇದೆಲ್ಲಕ್ಕಿಂತ ವಿಭಿನ್ನವಾಗಿದೆ. ಇಲ್ಲಿ ಸಾರಾಯಿ, ಸಿಗರೇಟು ಜೊತೆಗೆ ಚಿಕನ್, ಮಟನ್​ ಪ್ರಸಾದವಾಗಿ ನೀಡಲಾಗುತ್ತದೆ. ಇಲ್ಲಿ ಹರಕೆ ತಿರಿಸಿಬೇಕೆಂದ್ರೆ ಸಿಗರೇಟು ಮತ್ತು ಮದ್ಯವನ್ನ ದೇವರಿಗೆ ಸಮರ್ಪಣೆ ಮಾಡಬೇಕು. ಈ ಕುರಿತು ವಿವರ ಇಲ್ಲಿದೆ.

ಉತ್ತರ ಕನ್ನಡ, ಮಾ.18 : ಜಿಲ್ಲೆಯ ಕಾರವಾರದ(Karwar)ಗೋವಾ ಗಡಿಯಲ್ಲಿ ವಿಭಿನ್ನವಾದ ಸರಾಯಿ ದೇವರ ಜಾತ್ರೆ ಕಂಡುಬರುತ್ತದೆ. ಕರಾವಳಿಯಲ್ಲಿ ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರಾ ಮಹೋತ್ಸವ ಇಂದು(ಮಾ. ಅದ್ದೂರಿಯಾಗಿ ನೇರವೇರಿತು. ಸಹಸ್ರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸಿದರು.

ಇನ್ನು ಸಾಮಾನ್ಯವಾಗಿ ಜಾತ್ರೆಗಳಲ್ಲಿ ಜನಜಂಗುಳಿ ಸೇರುವುದು, ರಥೋತ್ಸವ ನೇರವೇರುವುದನ್ನ ನೋಡಿದ್ದೆವೆ. ಜೊತೆಗೆ ದೇವರಿಗೆ ವಿವಿಧ ತರಹದ ರುಚಿ ರುಚಿಯಾದ ಖಾದ್ಯಗಳ ನೈವೇದ್ಯ, ಹಣ್ಣು,ಹೂ,ಕಾಯಿ ಅರ್ಪಣೆ ಮಾಡುವುದು ವಾಡಿಕೆ. ಆದರೆ, ಕಾರವಾರ ನಗರದ ಕೋಡಿಭಾಗ ಹತ್ತಿರವಿರುವ ಖಾಪ್ರಿ ದೇವರಿಗೆ ಹೆಂಡ, ಸಿಗರೇಟ್, ಮೇಣದ ಬತ್ತಿ ಅರ್ಪಣೆ ಮಾಡುವ ಮೂಲಕ ಇಲ್ಲಿಗೆ ಬರುವ ಭಕ್ತರು ತಮ್ಮ ಹರಿಕೆ ತಿರಿಸುತ್ತಾರೆ.

ಈ ಸಂಪ್ರದಾಯ ಇಂದು ಮೊನ್ನೆಯದಲ್ಲ, ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆಯುತ್ತಾ ಬಂದಿದೆ. ಇನ್ನು ಭಕ್ತರು ತಂದ ಸರಾಯಿಯನ್ನ ದೇವಸ್ಥಾನದ ಪಕ್ಕದಲ್ಲಿ ಚೌಕಾಕಾರದ ಮಟ್ಟಿನ ಹುಂಡಿಗೆ ಸುರಿಯುತ್ತಾರೆ. ಜೊತೆಗೆ ಸಿಗರೇಟ್ ಹಚ್ಚಿಸಿ ದೀಪ ಬೆಳಗುವ ರೀತಿ ಬೆಳಗುತ್ತಾರೆ. ಈ ರೀತಿ ಮಾಡುವುದರಿಂದ ತಾವು ಬೇಡಿಕೊಂಡ‌ ಹರಕೆಗಳು ಇಡೇರುತ್ತವೆ ಎನ್ನುವುದು ಇಲ್ಲಿಗೆ ಬರುವ ಭಕ್ತರು ನಂಭಿಕೆಯಾಗಿದೆ‌‌. ಇನ್ನು ಈ ಜಾತ್ರೆ ವಿಶೇಷ ಅಂದರೆ ಸರ್ವ ಧರ್ಮದವರು ಜಾತ್ರೆಗೆ ದೇವರ ದರ್ಶನ ಪಡೆಯುತ್ತಾರೆ.

ಖಾಪ್ರಿ ದೇವರ ಇತಿಹಾಸ
ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವಿದ್ದು, ಈ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ‌ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಕಾರವಾರ ನಗರ ಕೋಡಿಭಾಗನ ಕಾಳಿ ನದಿ ಹತ್ತಿರವಿರುವ ಈ ಸ್ಥಳಕ್ಕೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದನಂತೆ. ಅದಾದ ನಂತರ ಆತ ಕಣ್ಮರೆಯಾಗಿದ್ದು, ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ಬಳಿಕ ಕನಸ್ಸಿನಲ್ಲಿ ದೇವರು ಬಂದು ತನಗೆ ಕೋಳಿ, ಸಾರಾಯಿ, ಸಿಗರೇಟ್ ನೈವೇದ್ಯ ಮಾಡು ಎಂದು ಕೇಳಿಕೊಂಡಿತಂತೆ. ಅಲ್ಲಿಂದ ದೇವಸ್ಥಾನವನ್ನು ಕಟ್ಟಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

ಅಲ್ಲಿಂದ ಇಲ್ಲಿಯವರಗೆ ಈ ದೇವರಿಗೆ ನಡೆದುಕೊಂಡು ಬಂದ್ ಭಕ್ತರಿಗೆ ಖಾಪ್ರಿ ದೇವರು ಒಳ್ಳೆಯದನ್ನ ಮಾಡುತ್ತಾ ಬಂದಿದ್ದಾನೆ ಎನ್ನುವ ನಂಬಿಕೆ ಇದೆ. ಇನ್ನೂ ವಿಶೇಷ ಅಂದರೆ ಖಾಪ್ರಿ ದೇವರಲ್ಲಿ ಕೆಲಸದ ಸಮಸ್ಯೆ ಬಗ್ಗೆ, ಸಂತಾನ ಭಾಗ್ಯದ ಬಗ್ಗೆ,ಕೌಟುಂಬಿಕ ಕಲಹ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಕೇಳಿಕೊಂಡರೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ಇದೆ. ಹಾಗೆ ನೆರವೇರಿದ ಸಾಕಷ್ಟು ಉದಾಹರಣೆಗಳು ಇಲ್ಲಿ ಕಂಡ ಬಂದಿವೆ.

ಮನೆಯಲ್ಲಿ ಅತೀಯಾದ ಮದ್ಯವ್ಯಸನಿಗಳು ಇದ್ದರೆ, ದುಶ್ಚಟಗಳಿಗೆ ದಾಸರಾಗಿದ್ದರೆ, ಅಂತಹವರು ಬಂದು ಖಾಪ್ರಿ ದೇವರಿಗೆ ಬೇಡಿಕೊಂಡು ಹೆಂಡ, ಸಿಗರೇಟ್ ನೈವೇದ್ಯ ನೀಡಿದರೆ ಹೆಂಡ ಕುಡಿಯುವುದನ್ನ, ಸಿಗರೇಟ್ ಸೇದುವುದನ್ನ ಬಿಟ್ಟಿದ್ದಾರಂತೆ. ಹೀಗೆ ಈ ದೇವರು ವಿಶೇಷ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ. ಒಟ್ಟಾರೆಯಾಗಿ ಅನೇಕ ವಿಶೇಷತೆಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ. ಇಲ್ಲಿನ ವೈವಿದ್ಯಮಯ ನೈಸರ್ಗಿಕ ಸಂಪತ್ತಿನ ಜೊತೆಗೆ ಇಲ್ಲಿನ ಜಾತ್ರೆ ಹಾಗೂ ಸಂಪ್ರದಾಯಗಳು ಕೂಡ ವಿಭಿನ್ನ ಮತ್ತು ವಿಶೇಷತೆಗಳನ್ನು ಹೊಂದಿವೆ.