ಶಿವಮೊಗ್ಗ: ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಗಾಳಿ ಬೀಸುತ್ತಿದೆ. ಈ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೂಡ ಒಂದು. ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ ಕೆ.ಎಸ್ ಈಶ್ವರಪ್ಪ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಸಂಧಾನ ವಿಫಲದ ನಂತರ ಕೇಂದ್ರದ ನಾಯಕರು ಈಶ್ವರಪ್ಪ ಅವರನ್ನು ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಹೌದು, ರಾಜ್ಯ ನಾಯಕರು ಈಶ್ವರಪ್ಪ ಅವರನ್ನು ಮನವೊಲಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಲ್ ಮತ್ತು ತಂಡ ಇಂದು ಈಶ್ವರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದೆ. ಮಾತುಕತೆಯ ನಡುವೆ ಎದ್ದು ಹೊದರ ಹೋದ ಈಶ್ವರಪ್ಪ ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಂದು ಗಂಟೆಯಾದರೂ ವಾಪಸ್ ಆಗದ ಹಿನ್ನೆಲೆ ಕಾದು ಕಾದು ಸುಸ್ತಾದ ವರಿಷ್ಠರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.
ಬಳಿಕ ಮಾತನಾಡಿದ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯದ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಭೇಟಿಗೆ ಬಂದಿದ್ದರು. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿದರು. ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಕಾಂತೇಶ್ ಅವರನ್ನು ಎಂಎಲ್ಸಿ ಮಾಡುವುದಾಗಿ ತಿಳಿಸಿದರು. ಇದು ಎಂಎಲ್ಎ, ಎಂಪಿ ಮಾಡುವ ವಿಚಾರವಲ್ಲ. ಪಕ್ಷ ಶುದ್ದಿಕರಣವಾಗಬೇಕು. ರಾಜ್ಯದ ಅನೇಕ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ, ಅದು ಸರಿಯಾಗಬೇಕು. ಹಿಂದುತ್ವವಾದಿಗಳನ್ನು ತುಳಿಯುತ್ತಿದ್ದಾರೆ. ಅದು ಸರಿಯಾಗಬೇಕು. ಹಿಂದುತ್ವ ಉಳಿಸಬೇಕು, ಪಕ್ಷ ಉಳಿಸಬೇಕು, ಕುಟುಂಬ ರಾಜಕಾರಣ ದೂರ ಆಗಬೇಕು ಎಂದು ಹೇಳಿದ್ದಾಗಿ ತಿಳಿಸಿದರು.
ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ಗೆ ನಾಯಕರು ತಿಳಿಸುತ್ತಾರೆ. ಮೋದಿ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು. ನಾನು ಬರುವುದಿಲ್ಲ, ಚುನಾವಣೆಯಲ್ಲಿ ಗೆದ್ದು ಮೋದಿ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದೇನೆ ಎಂದರು.