ಸಮಂತಾ ಅವರು ಭಾರಿ ಉತ್ಸಾಹದಿಂದ ಆರೋಗ್ಯದ ಕುರಿತು ಪಾಡ್ ಕಾಸ್ಟ್ ಮಾಡುತ್ತಿದ್ದಾರೆ. ‘ಟೇಕ್ 20’ ಹೆಸರಿನ ಈ ಕಾರ್ಯಕ್ರಮದಲ್ಲಿ ಅವರು ಕೆಲವು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಆ ಮಾಹಿತಿ ತಪ್ಪಾಗಿದ್ದು, ಜನರ ದಾರಿ ತಪ್ಪಿಸುತ್ತಿದೆ ಎಂದು ವೈದ್ಯರೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಮಯೋಸೈಟಿಸ್ ಕಾಯಿಲೆಯಿಂದ ಅವರಿಗೆ ತುಂಬ ತೊಂದರೆ ಆಯಿತು. ಅದಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಅವರು ವಿದೇಶಕ್ಕೆ ತೆರಳಿದ್ದರು. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದರು. ಈಗ ಅವರು ಚೇತರಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಬೇರೆ ಬೇರೆ ಚಟುವಟಿಕೆಗಳಲ್ಲಿ ಸಮಂತಾ ತೊಡಗಿಕೊಂಡಿದ್ದಾರೆ. ಅವರ ಪಾಡ್ಕಾಸ್ಟ್ ‘ಟೇಕ್ 20’ (Take 20) ಕಾರ್ಯಕ್ರಮ ಫೇಮಸ್ ಆಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಸಮಂತಾ (Samantha) ಅವರು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ.
ಸಮಂತಾ ರುತ್ ಪ್ರಭು ಅವರು ಆರೋಗ್ಯದ ಬಗ್ಗೆ ಏನಾದರೂ ಹೇಳುತ್ತಾರೆ ಎಂದರೆ ಅಭಿಮಾನಿಗಳು ಗಮನವಿಟ್ಟು ಕೇಳುತ್ತಾರೆ. ಅದೇ ಕಾರಣಕ್ಕೋ ಏನೋ ‘ಟೇಕ್ 20’ ಎಪಿಸೋಡ್ನಲ್ಲಿ ಲಿವರ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ ಈ ಸಂಚಿಕೆಯಲ್ಲಿ ಸಮಂತಾ ಹಾಗೂ ಅವರ ಜೊತೆ ಇರುವ ಅತಿಥಿ ಹಂಚಿಕೊಂಡ ಮಾಹಿತಿ ಸಂಪೂರ್ಣ ತಪ್ಪಾಗಿದೆ ಎಂದು ವೈದ್ಯರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಕರಾರು ತೆಗೆದಿದ್ದಾರೆ.
‘ಲಿವರ್ ಡಿಟಾಕ್ಸ್’ ಕುರಿತು ಈ ಸಂಚಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಈ ಮಾಹಿತಿಯು ಜನರ ದಾರಿ ತಪ್ಪಿಸುತ್ತಿದೆ ಎಂದು ವೈದ್ಯರೊಬ್ಬರು ತಕರಾರು ತೆಗೆದಿದ್ದಾರೆ. ‘ಇವರು ಫೇಮಸ್ ನಟಿ ಸಮಂತಾ. ತಮ್ಮ 33 ಮಿಲಿಯನ್ ಫಾಲೋವರ್ಸ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಜ್ಞಾನದ ಕುರಿತು ಅನಕ್ಷರಸ್ತರಾಗಿರುವ ಇಬ್ಬರು ವ್ಯಕ್ತಿಗಳು ತಮ್ಮ ಅಜ್ಞಾನವನ್ನು ಹರಡುತ್ತಿದ್ದಾರೆ. ಸಮಂತಾ ಜೊತೆ ಇರುವ ಈ ತರಬೇತುದಾರ ನಿಜವಾಗಿ ವೈದ್ಯಕೀಯ ಕ್ಷೇತ್ರದ ವ್ಯಕ್ತಿ ಅಲ್ಲ. ಲಿವರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದೂ ಈತನಿಗೆ ಗೊತ್ತಿಲ್ಲ’ ಎಂದು ವೈದ್ಯರು ಛಾಟಿ ಬೀಸಿದ್ದಾರೆ.
‘ನಾನು ಲಿವರ್ ವೈದ್ಯ. ಕಳೆದ 10 ವರ್ಷಗಳಿಂದ ಲಿವರ್ಗೆ ಸಂಬಂಧಿಸಿದ ಚಿಕಿತ್ಸೆ ನೀಡುತ್ತಿದ್ದೇನೆ. ಈ ಪಾಡ್ಕಾಸ್ಟ್ನಲ್ಲಿ ಇವರು ಹೇಳುತ್ತಿರುವುದು ಸಂಪೂರ್ಣ ಸುಳ್ಳು’ ಎಂದು ವೈದ್ಯರು ಟೀಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈದ್ಯರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕೆಲವು ಅಭಿಮಾನಿಗಳು ಸಮಂತಾ ಪರವಾಗಿ ವಾದ ಮಂಡಿಸಲು ಬಂದಿದ್ದಾರೆ. ಆದರೆ ಅದಕ್ಕೂ ಕೂಡ ಡಾಕ್ಟರ್ ಉತ್ತರ ನೀಡಿದ್ದು, ಸರಿಯಾಗಿ ತಿಳಿದುಕೊಳ್ಳುವಂತೆ ಹೇಳಿದ್ದಾರೆ. ‘ಸಮಂತಾ ಅಭಿಮಾನಿಗಳೇ.. ನೀವು ಅವರ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿ. ಆದರೆ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ತಜ್ಞರಿಗೆ ಬಿಡಿ. ಅದನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ’ ಎಂದು ವೈದ್ಯರು ಖಡಕ್ ತಿರುಗೇಟು ನೀಡಿದ್ದಾರೆ.