ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆ : ಚುನಾವಣೆಗೂ ಮುನ್ನ ಸಿಹಿ ಸುದ್ದಿ ಕೊಟ್ಟ ಕೇಂದ್ರ

ನವ ದೆಹಲಿ, ಮಾರ್ಚ್‌ 14 : ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಗಳಲ್ಲಿ ಇತ್ತೀಚಿನ ಕಡಿತದೊಂದಿಗೆ, ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೀಗ ನಿರೀಕ್ಷೆಯಂತೆ ಲೋಕಸಭಾ ಚುನಾವಣೆಗೂ ಮುನ್ನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ.

ಲೋಕಸಭಾ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ 2 ರೂ. ಕಡಿತಗೊಳಿಸಿದೆ. ಪರಿಷ್ಕೃತ ದರ ಮಾರ್ಚ್‌ 15ರ ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ.

ಬೆಲೆ ಇಳಿಕೆಯಿಂದ 58 ಲಕ್ಷ ಸರಕು ವಾಹನ, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲದ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 100 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಬೆಲೆ ಇಳಿಕೆಯು, ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಅಡುಗೆ ಇಂಧನವಾಗಿ ಬಳಸುವ ಸುಮಾರು 33 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ.