ಫೋಟೊಗ್ರಾಫರ್‌ನಿಂದ ಸಂಸತ್‌ ಟಿಕೆಟ್‌ವರೆಗೆ; ಸಿಂಪಲ್​ ಮ್ಯಾನ್​ ಕೋಟ ಶ್ರೀನಿವಾಸ ಪೂಜಾರಿ ಪಯಣ

kota srinivas poojary : ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಆರಂಭಿಸಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಇದೀಗ ಪಾರ್ಲಿಮೆಂಟ್​ ಮೆಟ್ಟಿಲೇರಲು ಸಜ್ಜಾಗಿದ್ದಾರೆ.

ಬೆಂಗಳೂರು, ಮಾರ್ಚ್‌ 13 : ಮುಂಬರುವ ಲೋಕಸಭಾ ಕ್ಷೇತ್ರ ಚುನಾವಣೆಗೆ (Lok Sabha Election) ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬುಧವಾರ (ಮಾರ್ಚ್​ 13ರಂದು) ಬಿಡುಗಡೆ ಮಾಡಿದೆ. ಒಟ್ಟು 72 ಅಭ್ಯರ್ಥಿಗಳಲ್ಲಿ ಕರ್ನಾಟಕದ 20 ಅಭ್ಯರ್ಥಿಗಳಿದ್ದಾರೆ. ಈ ಪಟ್ಟಿಯಲ್ಲಿ ವಿಶೇಷವಾಗಿ ಗಮನ ಸೆಳೆದಿರುವುದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota srinivas poojary). ಜನರ ನಡುವಿನ ನಾಯಕ ಹಾಗೂ ಅತ್ಯಂತ ಸರಳ ವ್ಯಕ್ತಿತ್ವದ ಶ್ರೀನಿವಾಸ ಪೂಜಾರಿ ಚುನಾವಣೆಯಲ್ಲಿ ಗೆದ್ದರೆ ಪಾರ್ಲಿಮೆಂಟ್ ಮೆಟ್ಟಿಲೇರುವುದು ನಿಶ್ಚಿತ. ಸಜ್ಜನ ಜನಪ್ರತಿನಿಧಿ ಎನಿಸಿಕೊಂಡಿರುವ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್​ ನೀಡಿರುವುದು ಅವರ ಕ್ಷೇತ್ರದ ಬಿಜೆಪಿ ಅಭಿಮಾನಿಗಳ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿದ್ದ ಅವರೀಗ ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕ. ಅವರನ್ನು ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಕಣಕ್ಕೆ ಇಳಿಸಿದೆ. ಕೋಟಾ ಶ್ರೀನಿವಾಸ ಪೂಜಾರಿ ಅವರು ಅತ್ಯಂತ ಸರಳ ವ್ಯಕ್ತಿತ್ವದವರು ಎಂಬುದು ಅವರನ್ನು ಬಲ್ಲವರು ಹೇಳುವ ಮೊದಲ ಮಾತು. ಅವರನ್ನು ಜನರು ಪಕ್ಷವನ್ನು ನೋಡದೇ ಪ್ರೀತಿಸುತ್ತಾರೆ ಎಂಬುದು ಕೂಡ ವಿಶೇಷ. ಅಭಿಮಾನಿಗಳ ದಂಡನ್ನು ಬಿಟ್ಟು ಸಾಮಾನ್ಯ ಜನರಂತೆ ಸುತ್ತಾಡುವ ಅವರು ಊಟ, ತಿಂಡಿಗೂ ಸಣ್ಣ ಪುಟ್ಟ ಹೋಟೆಲ್​ಗೆ ಹೋಗುತ್ತಾರೆ ಎಂಬುದು ವಿಶೇಷ.

ಸರಳ ರಾಜಕಾರಣಿ
ಸಾಮಾನ್ಯ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಹಲವು ಇಲಾಖೆಗಳಲ್ಲಿ ಸಚಿವರಾಗಿದ್ದಾರೆ . ಅವರೀಗ ಲೋಕ ಸಭಾ ಟಿಕೆಟ್​ ಪಡೆದು ತಮ್ಮ ವ್ಯಾಪ್ತಿಯನ್ನು ರಾಷ್ಟ್ರೀಯ ರಾಜಕಾರಣದ ಮಟ್ಟಿಗೆ ವಿಸ್ತರಿಸಿಕೊಂಡಿದ್ದಾರೆ. ನೇರ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದಿದ್ದಾರೆ ಅವರು. ಆದರೆ, ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ.

ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗುವುದರೊಂದಿಗೆ ರಾಜಕೀಯ ಜೀವನ ಆರಂಭಿಸಿದ್ದರು. 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು. 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. ಅವರು ಕರ್ನಾಟಕ ರಾಜಕೀಯದಲ್ಲಿ ಹಲವಾರು ನಿರ್ಣಾಯಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸಿ 6 ಜನವರಿ 2010 ರಿಂದ 4 ಜನವರಿ 2016 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 6 ಜನವರಿ 2016 ರಿಂದ 5 ಜನವರಿ 2022 ರವರೆಗೆ ಅವಧಿಗೆ ಮರು ಆಯ್ಕೆಯಾದರು. 2022ರಲ್ಲಿ ಮತ್ತೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 7, 2018 ರಿಂದ ಜುಲೈ 26, 2019 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದು, ಮತ್ತದೇ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ 7, 2021ರಂದು ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನಲಂಕರಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಸದ್ಯ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಆಳವಾದ ಅರಿವು, ಅಧ್ಯಯನಗಳಿವೆ.

ಫೋಟೋಗ್ರಫಿಯಿಂದ ಲೋಕಸಭಾ ಟಿಕೆಟ್​ ವರೆಗೆ
ಶ್ರೀನಿವಾಸ ಪೂಜಾರರು ಒಬ್ಬ ಸೃಜನಶೀಲ ರಾಜಕಾರಣಿ . ಆರಂಭದಲ್ಲಿ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿಸಿಕೊಂಡ ಅವರು ಬರವಣಿಗೆಯಲ್ಲಿಯೂ ಸಿದ್ಧಹಸ್ತರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ನಮ್ಮ ಕಮಲ ಎಂಬ ಪಂಚಾಯತ್ ರಾಜ್ ವ್ಯವಸ್ಥೆಯ ಬಗೆಗೆ ಮಾಸ ಪತ್ರಿಕೆಯೊಂದನ್ನು ಆರಂಭಿಸಿ ಅದರ ಸಂಪಾದಕರಾಗಿದ್ದರು. ಆಕರ್ಷಕ ಮಾತಿನ ವರಸೆ ಪೂಜಾರಿಯವರಿಗೆ ಸಲೀಸು. ಡಾ. ಶಿವರಾಮ ಕಾರಂತರ ಅಭಿಮಾನಿಯಾಗಿ ತನ್ನ ಹುಟ್ಟೂರಿನಲ್ಲಿ ಕಾರಂತ ಭವನ ನಿರ್ಮಾಣ, ಕಾರಂತ ಹುಟ್ಟೂರ ಪ್ರಶಸ್ತಿ ಸೇರಿದಂತೆ ಅವರ ನೆನಪನ್ನು ಕೋಟದಲ್ಲಿ ಚಿರಸ್ಥಾಯಿಯಾಗಿಸಿದ ಕೀರ್ತಿಯಲ್ಲಿ ಇವರದ್ದು ದೊಡ್ಡ ಪಾಲಿದೆ.