ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಮಿಸ್ ಆಗಿರುವುದು ಈಗಲ್ಲ.. ಮೂರು ತಿಂಗಳ ಹಿಂದೆಯೇ ಆಗಿದೆ ಎಂಬುದರ ಕ್ಲೂ ಕೊಟ್ಟಿದ್ದಾರೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್. ಅವರು ಹೇಳಿದ್ದೇನು?
ಬೆಂಗಳೂರು ಮಾರ್ಚ್ 12 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಮಿಸ್ ಆಗೋದು ಗ್ಯಾರಂಟಿ ಆಗಿದೆ. ಆದರೆ, ಇದು ಈಗ ನಿರ್ಧಾರವಾಗಿದ್ದಲ್ಲ. ಮೂರು ತಿಂಗಳ ಮೊದಲೇ ಡಿಸೈಡ್ ಆಗಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಇದರ ಬಗ್ಗೆ ಮೊದಲ ಕ್ಲೂ ಕೊಟ್ಟಿರುವುದು ಮಂಡ್ಯದ ಪಕ್ಷೇತರ ಸಂಸದೆ ಮತ್ತು ಈಗ ಬಿಜೆಪಿ ಟಿಕೆಟ್‌ಗಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಸುಮಲತಾ ಅಂಬರೀಷ್ ಅವರು!
ಸುಮಲತಾ ಅವರು ಮಂಡ್ಯದ ಟಿಕೆಟ್‌ಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಮೂರು ತಿಂಗಳ ಹಿಂದೆ ಅವರ ಮುಂದೆ ಮಂಡ್ಯ ಹೊರತಾದ ಇನ್ನೂ ಎರಡು ಆಯ್ಕೆಗಳನ್ನು ಇಟ್ಟಿತ್ತು. ʻʻನನ್ನ ಮುಂದೆ ಬಿಜೆಪಿ ಹೈಕಮಾಂಡ್ ಎರಡು ಆಯ್ಕೆಗಳನ್ನು ಇಟ್ಟಿತ್ತು. ಒಂದು ಮೈಸೂರು ಮತ್ತೊಂದು ಬೆಂಗಳೂರು ಉತ್ತರ. ಆದರೆ, ನಾನು ಇವೆರಡೂ ನನಗೆ ಬೇಡ ಎಂದು ಹೇಳಿದೆ. ನಾನು ಮಂಡ್ಯದಲ್ಲೇ ಹೋರಾಟ ನಡೆಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದೆʼʼ ಎಂದು ಮೂರು ತಿಂಗಳ ಹಿಂದೆ ನಡೆದ ಚರ್ಚೆಯ ಬಗ್ಗೆ ವಿವರ ನೀಡಿದ್ದಾರೆ.
ಅಂದರೆ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪುತ್ತಿರುವುದು ಆಕಸ್ಮಿಕವಲ್ಲ. ಮೂರು ತಿಂಗಳ ಹಿಂದೆಯೇ ಹೈಕಮಾಂಡ್ ಮೈಸೂರಿಗೆ ಬೇರೊಬ್ಬರನ್ನು ತರುವ ಬಗ್ಗೆ ಯೋಚನೆ ಮಾಡಿತ್ತು ಎನ್ನುವುದು ಸುಮಲತಾ ಅವರ ಮಾತಿನಿಂದ ಸ್ಪಷ್ಟವಾಗುತ್ತಿದೆ. ಸುಮಲತಾ ಅವರಿಗೆ ಮೊದಲ ಆಫರ್ ಆಗಿಯೇ ಮೈಸೂರನ್ನು ನೀಡಲಾಗಿತ್ತು. ಬೆಂಗಳೂರು ಉತ್ತರ ಎರಡನೇ ಆಫರ್ ಆಗಿತ್ತು!
ಹಾಗಿದ್ದರೆ ಹೈಕಮಾಂಡ್ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದಿರಲು ಹಿಂದೆಯೇ ನಿರ್ಧಾರ ಮಾಡಿತ್ತು. ಮತ್ತು ಮೈಸೂರಿಗೆ ಸೂಕ್ತವಾದ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿತ್ತು. ಮೊದಲು ಸುಮಲತಾ ಅವರನ್ನು ಕೇಳಿ ಬಳಿಕ ಬೇರೆ ಆಯ್ಕೆಗಳನ್ನು ನೋಡಿ ಇದೀಗ ಮೈಸೂರಿನ ಯದುವೀರ್ ಒಡೆಯರ್ ಅವರನ್ನು ಬಹುತೇಕ ಫೈನಲ್ ಮಾಡಿಧೆ ಎನ್ನುವುದು ಸ್ಪಷ್ಟ.