ನಯಾಬ್‌ ಸಿಂಗ್ ಸೈನಿ ಹರಿಯಾಣದ ಹೊಸ ಮುಖ್ಯಮಂತ್ರಿ

ಹರಿಯಾಣ ಮಾರ್ಚ್‌ 11 : ಮನೋಹರ್ ಲಾಲ್ ಖಟ್ಟರ್ (Manohar Lal Khattar) ರಾಜೀನಾಮೆಯಿಂದ (Resignation) ತೆರವಾದ ಹರಿಯಾಣದ ಮುಖ್ಯಮಂತ್ರಿ (Haryana CM) ಹುದ್ದೆಗೆ ನಯಾಬ್ ಸಿಂಗ್ ಸೈನಿ (Nayab Singh Saini ) ಆಯ್ಕೆಯಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ಸೈನಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

“ನಯಾಬ್ ಸಿಂಗ್ ಸೈನಿ ಹರಿಯಾಣದ ಮುಂದಿನ ಸಿಎಂ. ಎಲ್ಲಾ ಶಾಸಕರು ಈಗ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ” ಎಂದು ಬಿಜೆಪಿ ಶಾಸಕ ಕಿಶನ್ ಲಾಲ್ ಮಿದ್ಧಾ ಸುದ್ದಿಗಾರರಿಗೆ ತಿಳಿಸಿದರು. 2019ರಿಂದ ರಾಜ್ಯವನ್ನು ಆಳುತ್ತಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP)- ಜನನಾಯಕ್ ಜನತಾ ಪಕ್ಷ (JJP) ಮೈತ್ರಿಯ ಬಿರುಕುಗಳ ಪರಿಣಾಮ ಮನೋಹರ್ ಲಾಲ್ ಖಟ್ಟರ್ ಕೆಳಗಿಳಿದಿದ್ದು, ನಂತರ ಸೈನಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

ನಯಾಬ್‌ ಸಿಂಗ್‌ ಸೈನಿ ಯಾರು?
ಕುರುಕ್ಷೇತ್ರದ ಸಂಸದ ಹಾಗೂ ಒಬಿಸಿ ಸಮುದಾಯದ ಪ್ರಮುಖರಾಗಿರುವ ಸೈನಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿಯಾಣ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

1996ರಿಂದ ಬಿಜೆಪಿಯಲ್ಲಿ ಸೈನಿ ಅವರ ಪ್ರಯಾಣ ಪ್ರಾರಂಭವಾಯಿತು. ಹಂತ ಹಂತವಾಗಿ ಪ್ರಗತಿ ಸಾಧಿಸಿ 2002ರಲ್ಲಿ ಅಂಬಾಲಾ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2005ರಲ್ಲಿ ಅಂಬಾಲಾ ಜಿಲ್ಲಾ ಅಧ್ಯಕ್ಷರಾಗಿ, 2009ರಲ್ಲಿ ಹರಿಯಾಣದ ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2012ರಲ್ಲಿ ಅಂಬಾಲಾ ಬಿಜೆಪಿಯ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿ, 2014ರಲ್ಲಿ ನಾರಾಯಣಗಢ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 2016ರಲ್ಲಿ ಹರಿಯಾಣ ಸರ್ಕಾರದ ಸಚಿವರಾಗಿ ನೇಮಕಗೊಂಡರು.

2019ರ ಲೋಕಸಭೆ ಚುನಾವಣೆಯಲ್ಲಿ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ 3.83 ಲಕ್ಷ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನ ನಿರ್ಮಲ್ ಸಿಂಗ್ ಅವರನ್ನು ಸೋಲಿಸಿದರು. ಅವರನ್ನು ಮನೋಹರ್ ಲಾಲ್ ಖಟ್ಟರ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಚುನಾವಣಾ ಮತ್ತು ಜಾತಿ ಲೆಕ್ಕಾಚಾರಗಳು ಈ ಲೋಕಸಭಾ ಸಂಸದರನ್ನು ಹರಿಯಾಣದ ಮುಖ್ಯಮಂತ್ರಿ ಹುದ್ದೆಗೆ ಏರಿಸಿವೆ. ಕುರುಕ್ಷೇತ್ರ, ಯಮುನಾನಗರ, ಅಂಬಾಲಾ, ಹಿಸಾರ್ ಮತ್ತು ರೇವಾರಿ ಜಿಲ್ಲೆಗಳ ಪಾಕೆಟ್‌ಗಳಲ್ಲಿ ಗಣನೀಯ ಉಪಸ್ಥಿತಿ ಹೊಂದಿರುವ ಸೈನಿ ಜಾತಿಯ ಜನಸಂಖ್ಯೆಯು ಸುಮಾರು 8% ಇದೆ ಎನ್ನಲಾಗಿದೆ.

ಹರಿಯಾಣದಲ್ಲಿ ನಡೆದದ್ದೇನು?
ಬಿಜೆಪಿ ಇಲ್ಲಿ ಖಟ್ಟರ್‌ ನೇತೃತ್ವದಲ್ಲಿ ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು. ಚೌತಾಲಾ ಉಪಮುಖ್ಯಮಂತ್ರಿಯಾಗಿದ್ದರು. ಇದೀಗ ಬಿಜೆಪಿ ಹಾಗೂ ಚೌತಾಲಾ ನಡುವೆ ಸಂಬಂಧ ಹಳಸಿದೆ. ಪ್ರಾಥಮಿಕವಾಗಿ, ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಎರಡೂ ಪಕ್ಷಗಳು ವಿಫಲವಾಗಿವೆ. ಹೀಗಾಗಿ ಇಂದು ಬೆಳಗ್ಗೆ ಖಟ್ಟರ್‌ ರಾಜೇನಾಮೆ ನೀಡಿದ್ದರು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸದಸ್ಯಬಲ ಹೊಂದಿದೆ. 10 ಶಾಸಕರನ್ನು ಹೊಂದಿರುವ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಕ್ಟೋಬರ್ 2019ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಇದೀಗ ಸ್ವತಂತ್ರ ಶಾಸಕರನ್ನು ಸೇರಿಸಿಕೊಂಡು ಬಿಜೆಪಿ ಸಂಪುಟ ರಚಿಸಲು ಮುಂದಾಗಲಿದೆ.