ಹೊನ್ನಾವರ : ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆ ಅಳವಡಿಕೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ನೀಡಿದ ಗಡುವಿನೊಳಗೆ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ಹೊನ್ನಾವರ ಪಟ್ಟಣದಲ್ಲಿ ಕರುನಾಡ ವಿಜಯಸೇನೆ, ವಿನೂತನವಾಗಿ ಅಂಗಡಿ ಮುಗ್ಗಟ್ಟು ಮಾಲೀಕರಿಗೆ ಎಚ್ಚರಿಕೆ ನೀಡಿದೆ…
ಅಂಗಡಿ, ಮುಗ್ಗಟ್ಟುಗಳಿಗೆ ತೆರಳಿದ ಕರುನಾಡ ವಿಜಯಸೇನೆ ಸದಸ್ಯರು, ಗುಲಾಬಿ ಹೂ ನೀಡಿ ಮಾರ್ಚ್ 25ರೊಳಗಡೆ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ರು. ಒಂದು ವೇಳೆ ಕನ್ನಡ ನಾಮಫಲಕ ಅಳವಡಿಸದಿದ್ರೆ, ಸಂಘಟನೆ ವತಿಯಿಂದ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು…
ಈ ವೇಳೆ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಮೇಲೆ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕಿದೆ. ಎಲ್ಲಾ ಅಂಗಡಿ ಮಾಲೀಕರು ಈ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ ನಾವು ಮೊದಲಿಗೆ ಗುಲಾಬಿ ಹೂ ನೀಡಿ ಸಿಹಿಯಾದ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದ್ರು…
ಬಳಿಕ ಕರುನಾಡ ವಿಜಯಸೇನೆ ವತಿಯಿಂದ, ಇಂಗ್ಲೀಷ್ ನಾಮಫಲಕವಿರುವ ಎಲ್ಲಾ ಅಂಗಡಿಗಳಿಗೆ ತೆರಳಿ, ಗುಲಾಬಿ ಹೂ ನೀಡಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಕನ್ನಡ ಪರ ಹೋರಾಟಗಾರರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ರು…