ಕಾರವಾರ :- ಕಾರವಾರದ ದೇವಭಾಗ ಕಡಲ ತೀರದಲ್ಲಿ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ ಮತ್ತು ಮರೈನ್ ಇಕೋ-ಸಿಸ್ಟಮ್ ಸೆಲ್ ವತಿಯಿಂದ ಸಂರಕ್ಷಿಸಲ್ಪಟ್ಟೆ ಕಡಲಾಮೆ ಮೊಟ್ಟೆ ಒಡೆದು ಹೊರಬಂದ ಮರಿಗಳನ್ನು ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ, ಚನ್ನಕೇಶವ ರೆಡ್ಡಿ, ಉಪ ಲೋಕಾಯುಕ್ತ ಆಪ್ತ ಕಾರ್ಯದರ್ಶಿ ಕಿರಣ ಪಾಟೀಲ್, ಜಿಲ್ಲಾ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ರವರ ಸಮಕ್ಷಮ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಭಾನುವಾರ ಸಂಜೆ ಬಿಡಲಾಯಿತು.
ಕಳೆದ ಸಾಲಿನಿಂದ ಕಾರವಾರ ವಿಭಾಗದ ವ್ಯಾಪ್ತಿಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972 ರಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆಗಳಲ್ಲಿ ಆಲೀವ್ ರಿಪ್ಲೇ ಜಾತಿಯ ಕಡಲಾಮೆಗಳು ಕರ್ನಾಟಕ ಕರಾವಳಿಯಲ್ಲಿ ಮೊಟ್ಟೆ ಇಟ್ಟು ಹೊಗುತ್ತಿದ್ದು ಇಲಾಖೆಯು ಅವಗಳನ್ನು ಸಂರಕ್ಷಿಸಿ ಮರಿಗಳು ಸಮುದ್ರ ಸೇರುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಈ ಸಾಲಿನಲ್ಲಿ ಸುಮಾರು 100 ಕ್ಕೂ ಅಧಿಕ ಗೂಡುಗಳು ಕಾರವಾರ, ಅಂಕೋಲಾದ ವಿವಿಧ ಕಡಲ ತೀರದಲ್ಲಿ ಈಗಾಗಲೇ ಸಂರಕ್ಷಸಿಲ್ಪಟ್ಟಿವೆ.
ನಿನ್ನೆ ಇಂತಹದೆ ಗೂಡುಗಳಿಂದ ಮರಿಗಳು ಹೊರ ಬರುತ್ತಿರುವ ಮಾಹಿತಿ ಪಡೆದ, ಕಾರವಾರಕ್ಕೆ ಕರ್ತವ್ಯ ನಿಮಿತ್ತ ಆಗಮಿಸಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರ ತಂಡ ಸ್ಥಳಕ್ಕೆ ಆಗಮಿಸಿ ಕಡಲಾಮೆಗಳ ಮರಿಗಳನ್ನು ಸಮುದ್ರಕ್ಕೆ ಸೇರಿಸುವ ಕಾರ್ಯಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ ರವರು ಕಡಲಾಮೆ ಸಂರಕ್ಷಣೆಯಲ್ಲಿ ಇಲಾಖೆಯ ಕಾರ್ಯದ ಕುರಿತು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ.ಸಿ. ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ ಬಿ, ಕಿರಣ, ಗಜಾನನ ನಾಯ್ಕ ವಿಶ್ವನಾಥ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಟ್ಟಿ, ಜಿ. ಐ ನಾಯಕ ಅರಣ್ಯ ಪಾಲಕರಾದ ಮಲ್ಲೇಶ, ಹನಮಂತ, ಸಂಶೋಧನಾ ವಿದ್ಯಾರ್ಥಿ ಶಾನ್ ನವಾಜ್ ಹಾಗೂ ಕಾರವಾರ, ಗೋಪಿಸಿಟ್ಟ ವಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಟಾಗೋರ ಮತ್ತು ದೇವಭಾಗ, ಮಾಜಾಳಿ ಕಡಲತೀರವು ಕಡಲಾಮೆಗಳ ಮೊಟ್ಟೆಯಿಡುವ ನೆಚ್ಚಿನ ತಾಣಗಳಲ್ಲಿ ಒಂದಾಗಿದ್ದು, ನವೆಂಬರ್ ನಿಂದ ಮಾರ್ಚ ವರೆಗೆ ಕಡಲಾಮೆಗಳು ಮೊಟ್ಟೆಯಿಡುವ ಕಾಲವಾಗಿದ್ದು, ಕಡಲಾಮೆ ಸಂರಕ್ಷಣೆಯ ಜಾಗೃತಿಯ ಭಾಗವಾಗಿ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ ಮತ್ತು ಮರೈನ್ ಇಕೋ ಸಿಸ್ಟಮ್ ಘಟಕದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.