ವಕೀಲರು ಸಮಾಜ ಸುಧಾರಣೆ ಮಾಡುವ ಆರ್ಕಿಟೆಕ್ಟ್ಗಳು; ನ್ಯಾ. ಫಣೀಂದ್ರ

ಕಾರವಾರ:- ವಕೀಲರು ಸಮಾಜದಲ್ಲಿನ ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯ ಮೂಲಕ ಬಗೆಹರಿಸಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಬಹುದಾದ ವಾಸ್ತುಶಿಲ್ಪಿಗಳಾಗಿದ್ದು, ಲೋಕಾಯುಕ್ತ ಕಾನೂನು ಸೇರಿದಂತೆ ಎಲ್ಲಾ ಕಾನೂನುಗಳ ಸಮಗ್ರ ಜ್ಞಾನ ಹೊಂದಿರುವುದು ಅತ್ಯಗತ್ಯ ಎಂದು ರಾಜ್ಯದ ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.

ಅವರು ಇಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದಲ್ಲಿ ನಡೆದ, ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ವಕೀಲರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಜೀವಿಸುವ ಅವಕಾಶ ನೀಡಿದ್ದು, ಇದೇ ಉದ್ದೇಶದಿಂದ ಸರ್ಕಾರವು ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಸಿಬ್ಬಂದಿ ವರ್ಗ ನೇಮಕ ಮಾಡುತ್ತದೆ. ಈ ಅಧಿಕಾರಿ ಸಿಬ್ಬಂದಿಗಳು ನಿಯಮಗಳನ್ನು ಮೀರಿ ಭ್ರಷ್ಟಾಚಾರದಲ್ಲಿ ತೊಡಗುವುದನ್ನು ನಿಯಂತ್ರಿಸಲು ಲೋಕಾಯುಕ್ತ ಕಾನೂನು ರಚನೆಯಾಗಿದೆ ಎಂದರು.

ದೇಶದಲ್ಲಿ ಕಾನೂನು ತಲುಪದ ಸ್ಥಳವೇ ಇಲ್ಲ.. ದೇಶಕ್ಕೆ ವಕೀಲ ಸಮುದಾಯ ನೀಡಿದಷ್ಟು ಕೂಡುಗೆ ಇತರೆ ಯಾರೂ ನೀಡಿಲ್ಲ. ಹೊಸ ಕಾನೂನು ರಚನೆ ಸಂದರ್ಭದಲ್ಲಿ ವಕೀಲರು ಅದನ್ನು ವಿಮರ್ಶೆ ಮಾಡಿ, ಸೂಕ್ತ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸುಧಾರಣೆ ತರಲು ಸಾಧ್ಯವಿದೆ ಎಂದರು.

ವಕೀಲರು ನಿರಂತರವಾಗಿ ಅಧ್ಯಯನಶೀಲರಾಗುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಕೊಳ್ಳಬೇಕು. ಎಲ್ಲಾ ವಿಷಯಗಳ ಬಗ್ಗೆ ಅರಿತಿರಬೇಕು. ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ಮಾತನಾಡಿ, ವಕೀಲರು ತಮ್ಮ ಕಕ್ಷಿದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಕಾನೂನುಗಳನ್ನು ಸಮಾಜದ ಅಭಿವೃದ್ಧಿಗಾಗಿ ಸಮರ್ಪಕವಾಗಿ ಜಾರಿಗೊಳಿಸಬೇಕು. ರಾಮ ರಾಜ್ಯ ನಿರ್ಮಾಣವಾಗಲು ವಕೀಲರ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಚನ್ನಕೇಶವ ರೆಡ್ಡಿ, ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ಜಿ.ಎಸ್.ನಾಯ್ಕ್ ಉಪಸ್ಥಿತರಿದ್ದರು.

                ವಕೀಲರ ಸಂಘದ ಅಧ್ಯಕ್ಷ ಜಾಂಬವಳಿಕರ್ ಸ್ವಾಗತಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ನ್ಯಾ.ರೇಣುಕಾ ರಾಯ್ಕರ್ ವಂದಿಸಿದರು.