ಅಂಕೋಲಾ : ಉತ್ತರಕನ್ನಡದಲ್ಲಿ ಅಕ್ಷರ ಜ್ಯೋತಿಯನ್ನು ಬೆಳಗಿಸಿದ ಡಾ. ದಿನಕರ ದೇಸಾಯಿ ಅವರ ಕೆನರಾ ವೆಲ್‌ಫೆರ್ ಟ್ರಸ್ಟಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸೆಲ್ಕೊ ಕಂಪೆನಿಯ ಸಿಎಸ್‌ಆರ್ ಯೋಜನೆಯಡಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಹಣಕಾಸಿನ ನೆರವಿನೊಂದಿಗೆ ಸೋಲಾರ್ ವಿದ್ಯುತ್ ಸೌಲಭ್ಯವನ್ನು ಅಳವಡಿಸಲಾಗಿದೆ. ಈ ಯೋಜನೆ ಒಟ್ಟು ರೂ. 15 ಲಕ್ಷ ವೆಚ್ಚದಲ್ಲಿ ಸಾಕಾರಗೊಂಡಿದೆ.
ವಿಶಾಲವಾದ ಕ್ಯಾಂಪಸನಲ್ಲಿ ಸೋಲಾರ ಅಳವಡಿಕೆ ಸವಾಲಿನ ಸಂಗತಿಯಾಗಿದ್ದರೂ ಸಹ ಸೆಲ್ಕೊ ಸಂಸ್ಥೆಯ ಪರಿಣಿತ ಸಿಬ್ಬಂದಿಗಳು ಈ ಯೊಜನೆಯನ್ನು ಎರಡು ಯುನಿಟಗಳಲ್ಲಿ ವಿಭಜಿಸಿ ಯುಜಿಸಿ ಸಭಾಭವನದ ಮೇಲೆ 400 ವ್ಯಾಟ್ ವಿದ್ಯುತ್ ಉತ್ಪಾದಿಸುವ 18 ಪ್ಯಾನೆಲ್‌ಗಳನ್ನು ಅಳವಡಿಸಿದ್ದು ಈ ವಿದ್ಯುತ್ ಸಂಗ್ರಹಣೆಗೆ 200 ಎ.ಎಚ್. ಸಾಮರ್ಥ್ಯದ 10 ಬ್ಯಾಟರಿಗಳನ್ನು ಸಭಾಭವನದ ಒಳಗಡೆ ಸುರಕ್ಷಿತ ರ‍್ಯಾಕ್‌ಗಳಲ್ಲಿ ಇಡಲಾಗಿದೆ. ಮತ್ತೊಂದು ಯುನಿಟನ್ನು ಗ್ರಂಥಾಲಯದಲ್ಲಿ ಅಳವಡಿಸಲಾಗಿದ್ದು ಅದರ ಛಾವಣಿಯ ಮೇಲೆ 400 ವ್ಯಾಟ್ ವಿದ್ಯುತ್ ಉತ್ಪಾದಿಸುವ 12 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. 200 ಎ.ಎಚ್. ಸಾಮರ್ಥ್ಯದ 8 ಬ್ಯಾಟರಿಗಳನ್ನು ಗ್ರಂಥಾಲದ ಒಳಗಡೆ ರ‍್ಯಾಕನಲ್ಲಿ ಇಡಲಾಗಿದೆ. ಒಟ್ಟು 18 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಜೊತೆಗೆ 05 ಸೋಲಾರ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಕಚೇರಿ ಕಟ್ಟಡಕ್ಕೆ ಸೋಲಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಏರುತ್ತಿರುವ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡುವ ಮತ್ತು ನಿರಂತರವಾಗಿ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳುವುದಕ್ಕಾಗಿ ನವೀಕರಿಸಬಹುದಾದ ಸೋಲಾರ್ ವಿದ್ಯುತ್ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವರು.
ಸಂಸ್ಥೆಯ ಅಧ್ಯಕ್ಷರಾದ ಎಸ್. ಪಿ. ಕಾಮತ ಅವರು ಸೆಲ್ಕೊ ಸಂಸ್ಥೆಯ ಮುಖ್ಯಾಧಿಕಾರಿ ಮೋಹನ ಬಿ. ಹೆಗಡೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಕಾರವನ್ನು ಸ್ಮರಿಸಿರುವರು. ಡಾ. ದಿನಕರ ದೇಸಾಯಿಯವರ ಕಂಚಿನ ಪುತ್ಥಳಿಗೆ ಸೋಲಾರ ಚಾಲಿತ ವಿಶೇಷ ಫೋಕಸ್ ದೀಪವನ್ನು ಅಳವಡಿಸಿರುವುದು ವಿಶೇಷವಾಗಿದೆ. ದಿನಕರನಿಂದ ದಿನಕರರ ಸಂಸ್ಥೆಗೆ ಬೆಳಕು ನೀಡಿದ ಯೋಜನೆಯನ್ನು ಸೋಮವಾರ ಉದ್ಘಾಟಿಸಲಾಗುವುದು.