ಒಂದೆಡೆ ವಿಧ ವಿಧದ ಹೂವುಗಳು, ಗರಿಕೆ ಹುಲ್ಲಿನಿಂದ ಅಲಂಕಾರಗೊಂಡು ಮನೆಯಲ್ಲಿ ಕಂಗೊಳಿಸುತ್ತಿರುವ ಗಣೇಶನ ಮೂರ್ತಿ. ಇನ್ನೊಂದೆಡೆ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ, ಭಕ್ತಿಯಿಂದ ಬೇಡಿಕೊಳ್ಳುತ್ತಿರುವ ಜನರು. ಮತ್ತೊಂದೆಡೆ ವಿಘ್ನನಿವಾರಕನ ಭಜನೆ ಮಾಡುತ್ತಾ ಆರತಿ ಬೆಳಗುತ್ತಿರುವ ಮಹಿಳೆಯರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ.
ಮಾಘ ಚತುರ್ಥಿ ಹಿನ್ನೆಲೆ ಕಾರವಾರಿಗರು ಇಂದು ಗಣೇಶ ಹಬ್ಬವನ್ನ ಆಚರಿಸಿ ಸಂಭ್ರಮಿಸಿದರು. ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲೇ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲ್ಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಮಾಘ ಚೌತಿಯಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೇ ಹೇಳಲಾಗುತ್ತದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಸಹ ಮಾಘ ಚೌತಿಯಂದು ಒಂದು ದಿನದ ಮಟ್ಟಿಗೆ ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ.
ಕಳೆದ 19 ವರ್ಷಗಳ ಹಿಂದೆ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಬಳಿಯ ಸರ್ಕಲ್ ಅಪಘಾತಗಳ ಸೆಂಟರ್ ಪಾಯಿಂಟ್ ಆಗಿತ್ತು, ವಾರಕ್ಕೆ ಎರಡು ಮೂರು ಸಾವು ಆಗೊದು ಸಹಜವಾಗಿತ್ತು. ಸಾವಿಗೆ ಬ್ರೇಕ್ ಹಾಕಬೇಕೆಂಬ ಸದುದ್ದೇಶದಿಂದ ಗ್ರಾಮಸ್ಥರೆಲ್ಲ ಸೇರಿ ಗಣೇಶನ ಪ್ರತಿಷ್ಠಾಪಣೆ ಮಾಡಲು ಆರಂಭ ಮಾಡಿದ್ರು. ಅಂದಿನಿಂದ ಈ ಸರ್ಕಲ್ ನಲ್ಲಿ ವರ್ಷಕ್ಕೆ ಒಂದೊ ಎರಡು ಅಪಘಾತ ಆಗುತ್ತೆ ಅಷ್ಟೆ ಎನ್ನುತ್ತಾರೆ ಇಲ್ಲಿನ ಜನರು.
ಇನ್ನು ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಣೆಯಲ್ಲಿದೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಇರುವ ಹಿನ್ನಲೆ ಮಾಘ ಚೌತಿಯನ್ನ ಕಾರವಾರದಲ್ಲೂ ಸಹ ಆಚರಣೆ ಮಾಡಿಕೊಂಡು ಬಂದಿದ್ದು, ಉತ್ತರಕನ್ನಡ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಅಷ್ಟಾಗಿ ಈ ಹಬ್ಬವನ್ನ ಆಚರಿಸುವುದಿಲ್ಲ.
ಹಲವರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಘ ಚೌತಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಅದು ಈಡೇರಿದ ವೇಳೆ ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುವ ಪದ್ದತಿ ನಡೆದುಕೊಂಡು ಬಂದಿದೆ. ಅಲ್ಲದೇ ಕೆಲವರು ಮಾಘ ಚತುರ್ಥಿಯಂದು ಸಾರ್ವಜನಿಕ ಮೂರ್ತಿಯನ್ನೂ ಸಹ ಪ್ರತಿಷ್ಠಾಪಿಸಿ, ಪೂಜಿಸಿ, ಸಂಜೆಯ ವೇಳೆಗೆ ವಿಸರ್ಜನೆ ಮಾಡುತ್ತಾರೆ.
ಒಟ್ಟಿನಲ್ಲಿ ಮಾಘ ಚೌತಿ ಹಬ್ಬದ ಹಿನ್ನಲೆ ಕಡಲನಗರಿ ಕಾರವಾರದಲ್ಲಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಜನರು ಪೂಜೆ ಸಲ್ಲಿಸುವ ಮೂಲಕ ವಿಘ್ನನಿವಾರಕನನ್ನ ಆರಾಧಿಸಿದ್ದು ವಿಶೇಷವೇ. ಎರಡನೇ ಗಣಪತಿ ಹಬ್ಬ ಎಂದೇ ಕರೆಯುವ ಮಾಘ ಚೌತಿ ಹಬ್ಬದ ಸಂಭ್ರಮ ಗಣೇಶ ಚತುರ್ಥಿಯಂತೆಯೇ ಕಂಡುಬಂದಿದ್ದಂತೂ ಸತ್ಯ.