ಹಬ್ಬುವಾಡ ರಸ್ತೆ, ಡಿವೈಡರ್, ಚರಂಡಿ, ವಿದ್ಯುತ್‌ದೀಪ ಅಳವಡಿಕೆ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ – ರೂಪಾಲಿ ಎಸ್‌. ನಾಯ್ಕ

ಕಾರವಾರ : ಕಾರವಾರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ, ಡಿವೈಡರ್, ವಿದ್ಯುತ್‌ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಎಚ್ಚರಿಕೆ ನೀಡಿದ್ದಾರೆ…

ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯವಾದರೂ ಚರಂಡಿಗೆ ಸ್ಲ್ಯಾಬ್ ಹಾಕಿ ಮುಚ್ಚುವುದು, ಡಿವೈಡರ್ ನಿರ್ಮಾಣ, ವಿದ್ಯುತ್‌ದೀಪ್‌ ಅಳವಡಿಸುವ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವಂತಾಗಿದೆ. ಹಬ್ಬುವಾಡ ರಸ್ತೆಯ ಡಿವೈಡರ್‌ನಲ್ಲಿ ವಿದ್ಯುತ್ ದೀಪ ಅಳವಡಿಸಲು ಒಟ್ಟು 3 ಕೋಟಿ ರೂ. ರಸ್ತೆಯಲ್ಲಿ 27 ಲಕ್ಷ ರೂ. ಇಡಲಾಗಿದೆ. ವಿದ್ಯುತ್‌ದೀಪ ಅಳವಡಿಸಿದ್ರೆ, ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಅನುಕೂಲವಾಗುತ್ತಿತ್ತು. ನಗರದ ಸೌಂದರ್ಯವೂ ಹೆಚ್ಚುತ್ತಿತ್ತು. ಜತೆಗೆ ನನ್ನ ಪ್ರಯತ್ನದಿಂದ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುತ್‌ದೀಪ ಅಳವಡಿಕೆಗೆಂದೆ ಹಣ ಮಂಜೂರು ಮಾಡಲಾಗಿತ್ತು. ಈಗ ಏನೂ ಮಾಡದೆ ಹಾಗೆ ಬಿಟ್ಟಿರುವುದರಿಂದ ಅಪಘಾತಗಳೂ ಉಂಟಾಗುತ್ತಿವೆ…

ಹಬ್ಬುವಾಡ ರಸ್ತೆಯ ಚರಂಡಿ ನಿರ್ಮಾಣಕ್ಕೆ ಅಗತ್ಯ ಹಣವಿದ್ದರೂ ಈ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಚರಂಡಿಗೆ ಸಿಮೆಂಟ್ ಹಲಗೆಯನ್ನು ಶೀಘ್ರದಲ್ಲಿ ಮುಚ್ಚುವ ಅವಶ್ಯಕತೆಯಿದೆ. ಚಿಕ್ಕ ಮಕ್ಕಳು, ಮಹಿಳೆಯರು, ಜನತೆಗೆ ಸುರಕ್ಷಿತ ಓಡಾಟಕ್ಕೆ ಅವಕಾಶ ಒದಗಿಸಬೇಕಾಗಿದೆ. ಈ ರಸ್ತೆಯ ಪಕ್ಕದಲ್ಲಿ 300 ಮೀ. ಚರಂಡಿ ನಿರ್ಮಾಣವಾಗಿದೆ. ಆದರೆ ಸ್ಲ್ಯಾಬ್ ಹಾಕುವ ಕಾರ್ಯ ಬಾಕಿ ಉಳಿದಿದೆ. ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಹಣ ಸಹ ಬಿಡುಗಡೆಯಾಗಿದೆ. ಈ ಕೂಡಲೇ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಮುಂದೆ ಎಪಿಎಂಸಿ ತನಕ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್. ನಾಯ್ಕ ಆಗ್ರಹಿಸಿದ್ದಾರೆ..