ಅಂಕೋಲಾ : ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿದ್ದು, ಈ ಕುರಿತು ತಾಲೂಕಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಬರ್ಲಿನ್ ಸೀಸ್ಟಾಬೇಯವರಾಗಿದ್ದು ಪ್ರಸ್ತುತ ಬೆಂಗಳೂರಿನ ಆರ್‌ಟಿ ನಗರದ ಡಿಫೆನ್ಸ್ ಕಾಲನಿಯ ಕುಮಾರ್ ರೆಸಿಡೆನ್ಸಿಯಲ್ಲಿನ ಅನ್ನೆ ಕ್ರಿಸ್ಟಿನ್ ಲಿಡಾಚೆ ನಗದು ಹಣ ಕಳ್ಳತನವಾಗಿರುವ ಕುರಿತು ದೂರು ಸಲ್ಲಿಸಿದ್ದಾರೆ. ಅವರು ಎರ್ನಾಕುಲಂ- ಪುಣೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ (22149) ಕಳೆದ ಜನವರಿ 23ರಂದು ಪ್ರಯಾಣಿಸುತ್ತಿದ್ದರು. ಸಂಜೆ 7ಗಂಟೆಗೆ ರೈಲು ಅಂಕೋಲಾ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಸಂಚರಿಸುವ ವೇಳೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಅನ್ನೆ ಅವರ ಬಳಿ ಇದ್ದ ₹35,155 ನಗದು (400 ಯುರೋ ಮೌಲ್ಯ), ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈ ಕುರಿತು ಕಾರವಾರದ ಕೊಂಕಣ ರೈಲ್ವೆಯ ಆರ್‌ಪಿಎಫ್ ಕಚೇರಿಯವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ತಾಲೂಕಿನ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್ಐ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಾಲೂಕಿನ ವ್ಯಾಪ್ತಿಯ ರೈಲ್ವೆ ಸಂಚಾರ ಮಾರ್ಗದಲ್ಲಿ ಇತ್ತೀಚಿಗೆ ಹೊರ ರಾಜ್ಯದ ಮತ್ತು ಹೊರದೇಶದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕಳ್ಳತನ ಹಾಗೂ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು.