ದಾಂಡೇಲಿ : ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಹಳೆದಾಂಡೇಲಿಯಲ್ಲಿ ನವೀಕರಿಸಲ್ಪಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯ್ತು.
ನವೀಕೃತ ಮನೆಯನ್ನು ಉದ್ಘಾಟಿಸಿ ಮಾತನಾಡಿದ ನಗರ ಸಭೆಯ ಸದಸ್ಯರಾದ ನಂದೀಶ್ ಮುಂಗರವಾಡಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ವಾತ್ಸಲ್ಯ ಕಾರ್ಯಕ್ರಮದ ಮೂಲಕ ಬಡವರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಮಾಡುತ್ತಿದೆ. ಸಂಕಷ್ಟದಲ್ಲಿದ್ದವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬಡವರಿಗೆ ಆಸರೆಯಾಗಿ ಧರ್ಮಸ್ಥಳ ಸಂಸ್ಥೆಯು ಜನಮನದಲ್ಲಿ ಸದಾ ನೆಲೆ ನಿಂತಿದೆ ಎಂದರು.
ಫಲಾನುಭವಿ ಕಸ್ತೂರಿ ಪಾಟೀಲ್ ಅವರಿಗೆ ನವೀಕೃತ ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿಯವರು ಮಾತನಾಡಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಹತ್ವಕಾಂಕ್ಷಿ ಕಾರ್ಯಕ್ರಮವೇ ವಾತ್ಸಲ್ಯ ಕಾರ್ಯಕ್ರಮ. ಈ ಕಾರ್ಯಕ್ರಮದ ಮೂಲಕ ನಾಡಿನ ಸಾಕಷ್ಟು ಕಡೆಗಳಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ನವೀಕರಣ ಹೀಗೆ ಇನ್ನು ಅನೇಕ ಕಾಮಗಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.
ಫಲಾನುಭವಿ ಕಸ್ತೂರಿ ಪಾಟೀಲ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ.ಕ್ಷೇತ್ರ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ್ , ನ್ಯಾಯವಾದಿ ಶೈಲಾ, ಸ್ಥಳೀಯರಾದ ಸ್ನೇಹಾ ಮುಂಗರವಾಡಿ, ಸಂಸ್ಥೆಯ ವಲಯ ಮೇಲ್ವಿಚಾರಕ ರಾಜು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ತುಳಸಾ ವಿಶ್ವಕರ್ಮ, ಜ್ಞಾನವಿಕಾದ ಮಹಿಳಾ ಕೇಂದ್ರದ ಅಧ್ಯಕ್ಷೆ ನೇತ್ರಾ ಪಾಟೀಲ್,
ಸೇವಾಪ್ರತಿನಿಧಿಗಳಾದ ಮಂಜುಳಾ, ರೋಸಿಯಾ ಮತ್ತು ಸ್ಥಳೀಯ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.