ಉಳವಿಯಲ್ಲಿ ಶ್ರೀ.ಚೆನ್ನಬಸವೇಶ್ವರ ಜಾತ್ರೋತ್ಸವದ ನಿಮಿತ್ತ ಪೂರ್ವಭಾವಿ ಸಭೆ

ಜೋಯಿಡಾ : ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ.ಕ್ಷೇತ್ರ ಉಳವಿ ಜಾತ್ರೋತ್ಸವದ ನಿಮಿತ್ತ ಉಳವಿಯಲ್ಲಿ ಜೋಯಿಡಾ ಪಿಎಸ್ಐ ಮಹೇಶ್ ಮಾಳಿಯವರ ನೇತೃತ್ವದಲ್ಲಿ ಉಳವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕ್ರಯ್ಯ ಕಲ್ಮಠ ಅವರ ಅಧ್ಯಕ್ಷತೆಯಡಿ ಶುಕ್ರವಾರ ಸ್ಥಳೀಯ ವ್ಯಾಪಾರಸ್ಥರು ಹಾಗೂ ಊರ ನಾಗರಿಕರ ಜೊತೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ಮಹೇಶ್ ಮಾಳಿ ಅವರು ಶ್ರೀ ಕ್ಷೇತ್ರ ಉಳವಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಘನ ಪರಂಪರೆಯನ್ನು ಮತ್ತು ಗೌರವವನ್ನು ಉಳಿಸುವ ಕಾರ್ಯ ನಾವು ನೀವೆಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಅತ್ಯಂತ ಭಕ್ತಿ ಪ್ರಧಾನವಾಗಿ ಮತ್ತು ಶಿಸ್ತು ಬದ್ಧವಾಗಿ ಜಾತ್ರೋತ್ಸವವನ್ನು ಆಚರಿಸಲು ಎಲ್ಲರೂ ಸಹಕರಿಸಬೇಕು.‌ ಉಳವಿ‌ಯಲ್ಲಿ‌ ಸಂಪೂರ್ಣ ಮದ್ಯ ನಿಷೇಧ, ಸಂಪೂರ್ಣ ಪ್ಲಾಸ್ಟಿಕ್ ನಿಷೇಧ, ಮಾಂಸ ಮಾರಾಟ ನಿಷೇಧಕ್ಕೆ ಎಲ್ಲರೂ ಸಹಕರಿಸಬೇಕು . ಜಾತ್ರಾ ಸಮಯದಲ್ಲಿ ಮಧ್ಯಸಾಗಾಟ ತಡೆಯಲು ಪ್ರಮುಖ ಸ್ಥಳಗಳಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುತ್ತದೆ. ಮದ್ಯ ಸೇವಿಸಿ ವಾಹನ ಚಲಾಯಿಸಿಕೊಂಡು ಬರುವಂತವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ಅಕ್ರಮ ಮದ್ಯ ಮಾರಾಟ ಕಂಡು ಬಂದ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಮಧ್ಯವನ್ನು ಒದಗಿಸಿಕೊಟ್ಟವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಪೊಲೀಸರನ್ನು ಹಾಗೂ ಪೋಲಿಸ್ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಂಕ್ರಯ್ಯ ಕಲ್ಮಠ ಅವರು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೋತ್ಸವದ ಯಶಸ್ಸಿಗೆ ಸರ್ವರು ಸಹಕರಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಸ್ಥಳೀಯ ಪ್ರಮುಖರು, ವ್ಯಾಪರಸ್ತರು ಉಪಸ್ಥಿತರಿದ್ದರು