ಸಿದ್ದಾಪುರ: ರೈತರು ಹೈನುಗಾರಿಕೆಯಲ್ಲಿ ತೊಡಗುವ ಜತೆಯಲ್ಲಿ ಕೆಎಂಎಫ್ ನ ನಂದಿನಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ ಒಕ್ಕೂಟ ಬಲಪಡಿಸಿ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ಸಿದ್ದಾಪುರ ಪಟ್ಟಣದ ಹೊಸೂರಿನಲ್ಲಿ ನಿರ್ಮಾಣವಾದ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಉಪವಿಭಾಗ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ಮತ್ತು ಗೋವುಗಳ ನಡುವಿನ ಸಂಬಂಧ ತುಂಬಾ ಅನ್ಯೋನ್ಯವಾಗಿದೆ. ಗೋವು ಮತ್ತು ಹಾಲಿನ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ರತಿ ಮನೆಯಲ್ಲೂ ಹಸುವನ್ನು ಸಾಕಿ ಹಾಲು ಉತ್ಪಾದನೆಗೆ ಸಹಕರಿಸಬೇಕು. ರಾಸಾಯನಿಕವನ್ನು ಹೆಚ್ಚು ಬಳಸುವ ಮೂಲಕ ಮುಂದಿನ ಪೀಳಿಗೆಗೆ ವಿಷಪೂರಿತ ಆಹಾರ ಉತ್ಪಾದಿಸುತ್ತಿದ್ದೇವೆ. ಪರ್ಟಿಲೈಸರ್ ಕಡಿಮೆ ಮಾಡುವ ಮೂಲಕ ಜಾನುವಾರುಗಳ ಸಗಣಿ ಗೊಬ್ಬರವನ್ನು ಬಳಸಿ ಕೃಷಿ ಮಾಡಬೇಕು. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ರೈತರು ಇನ್ನು ಹೆಚ್ಚಿನ ಹಾಲು ಉತ್ಪಾದನೆ ಮಾಡಬೇಕು. ರೈತರು ಹಾಗೂ ಸಾರ್ವಜನಿಕರು ಕೆಎಂಎಪ್ ನ ನಂದಿನಿ ಉತ್ಪನ್ನಗಳನ್ನು ಖರೀದಿಸಿ ಒಕ್ಕೂಟಕ್ಕೆ ಬಲ ನೀಡಿ ಎಂದರು.
ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಹೊಸೂರಿನ ಈ ಜಾಗವನ್ನು ಉಳಿಸಿಕೊಳ್ಳಲು ಸಾಕಷ್ಟು ಜನರ ಪಾತ್ರವಿದೆ. ಒಕ್ಕೂಟ ಸದೃಡವಾದಂತೆ ರೈತರು ಹಾಗೂ ಸಿಬ್ಬಂದಿಗಳ ಆರ್ಥಿಕ ಶಕ್ತಿ ವೃದ್ಧಿಸಲಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಪಪಂ ಸದಸ್ಯೆ ಯಶೋಧಾ ಮಡವಾಳ, ಒಕ್ಕೂಟದ ನಿರ್ದೇಶಕರಾದ ಪಿ.ವಿ.ನಾಯ್ಕ, ಸುರೇಶ್ಚಂದ್ರ ಹೆಗಡೆ, ನೀಲಕಂಠಪ್ಪ ಅಸೂಟಿ, ಸುರೇಶ ಬಣವಿ, ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ಕೊಡಿಯಾಲಮಠ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕಾನಂದ ಹೆಗಡೆ, ಒಕ್ಕೂಟದ ಡಾ. ವಿರೇಶ ತರಲಿ ಉಪಸ್ಥಿತರಿದ್ದರು. ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜೂರ್ ನಿರೂಪಿಸಿದರು. ವಿಸ್ತರಣಾಧಿಕಾರಿ ಪ್ರಕಾಶ ಕೆ ಸ್ವಾಗತಿಸಿದರು.