ಬರಲಿರುವ ಲೋಕಸಭಾ ಚುನಾವಣೆ ಬಹಿಷ್ಕಾರ : ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ನಿರ್ಧಾರ

ದಾಂಡೇಲಿ : ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದಿರುವುದಕ್ಕೆ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ ಮಾತನಾಡಿದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಅವರು 2018 ರಲ್ಲೆ ಜಿ+2 ಆಶ್ರಯ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿತ್ತು. ಆದರೆ ಈವರೇಗೆ ಮನೆ ನಿರ್ಮಾಣ ಕಾರ್ಯ ಮುಗಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರನ‌ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಈ ಬಗ್ಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಜಿ+2 ಆಶ್ರಯ ಮನೆ ವಿತರಣೆ ಮಾಡದ‌ ಹಿನ್ನಲೆಯಲ್ಲಿ ಬರಲಿರುವ ಲೋಕಸಭಾ‌ ಚುನಾವಣೆಯನ್ನು ಬಹಿಷ್ಕರಿಸುತ್ತಿರುವ ಬಗ್ಗೆ ಈಗಾಗಲೆ ಚುನಾವಣಾ ಆಯುಕ್ತರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.

ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪನವರ ಅವರು ಮಾತನಾಡಿ ಕರ್ನಾಟಕ ಗೃಹ ಮಂಡಳಿಯವರು ನಿವೇಶನಕ್ಕಾಗಿ 3400 ಅರ್ಜಿಗಳನ್ನು ಸ್ವೀಕರಿಸಿ 10 ವರ್ಷ ಕಳೆದರೂ, ಈವರೇಗೆ ನಿವೇಶನ‌‌ ನೀಡಿಲ್ಲ. ಈ ಬಗ್ಗೆ ಕೂಡಲೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಮುಜೀಬಾ ಛಬ್ಬಿ, ನೀಲಾ ಮಾದರ, ಸಾಹಜಾದಿ ಕುಲ್ಸಾಪುರ್, ಶಾಮ್ ಬೆಂಗಳೂರು, ಮಹಮ್ಮದ್ ಗೌಸ್ ಬೆಟಗೇರಿ ಉಪಸ್ಥಿತರಿದ್ದರು.