ರಾಮನಗರದಲ್ಲಿ ಕಿಡಿಗೇಡಿಗಳಿಂದ ಮರಕ್ಕೆ ಬೆಂಕಿ : ರಾಮನಗರದಲ್ಲಿರುವ ರಾವಣರ ಎತ್ತಂಗಡಿ ಯಾವಾಗ?.

ಜೋಯಿಡಾ : ತಾಲೂಕಿನ ರಾಮನಗರ-ಸದಾಶಿವಗಡ -ಔರಾದ್ ರಸ್ತೆಯ ಜಗಲಬೇಟ ಅರಣ್ಯ ವ್ಯಾಪ್ತಿಯ ರಾಮನಗರ ಬಳಿ ಯಾರೋ ಕಿಡಗೇಡಿಗಳು 50 ವರ್ಷಗಳಷ್ಟು ಹಿಂದಿನ ಹಸಿ ಮರವೊಂದಕ್ಕೆ ಬೆಂಕಿ ಕೊಟ್ಟು ಸಾಯಿಸುವ ಪ್ರಯತ್ನ ಮಾಡಿದ ಘಟನೆ ನಡೆದಿದೆ.

ಕೂಡಲೇ ಕಾರ್ಯಪೃರ್ವತರಾದ ಜಗಲಬೇಟ್ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಬೆಂಕಿ ಆರಿಸುವ ಕಾರ್ಯ ಮಾಡಿದ್ದಾರೆ.

ರಸ್ತೆ ಪಕ್ಕದಲ್ಲಿ ಮರಗಳು ಇದ್ದರೆ ನೆರಳು ಇರುತ್ತದೆ ಎನ್ನುವ ಉದ್ದೇಶದಿಂದ ಈ ಹಿಂದಿನವರು ಗಿಡ ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಆದರೆ ಅಂತಹ ಮರವನ್ನು ಬೆಂಕಿ ಹಾಕಿ ಸಾಯಿಸುವ ಪ್ರಯತ್ನ ಇಲ್ಲಿ ನಡೆದಿದೆ. ಈ‌ ಮರವನ್ನು ಸಾಯಿಸಿ ಇಲ್ಲಿ ಮನೆ ನಿರ್ಮಾಣಕ್ಕೋ ಅಥವಾ ಗೂಡಂಗಡಿ ಕಟ್ಟುವ ಉದ್ದೇಶದಿಂದಲೂ ಬೆಂಕಿ ಹಾಕಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಅದೇನೆ ಇರಲಿ ರಾಮನಗರ ಭಾಗದಲ್ಲಿ ಅತಿಕ್ರಮಣವಂತು ಎಗ್ಗಿಲ್ಲದೆ ನಡೆಯುತ್ತಿದೆ. ಮರಗಳನ್ನು ಕಡಿದೋ, ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿಯೊ ಅಥವಾ ಗಟಾರದ ಮೇಲೆ ಮನೆ ಕಟ್ಟುವ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡುವ ಕೆಲಸ ನಡೆಯುತ್ತಲೆ‌ ಇದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯ್ತು ಅಧಿಕಾರಿಗಳು‌, ಸಿಬ್ಬಂದಿಗಳು ಮಾತ್ರ ಎಲ್ಲವೂ ಗೊತ್ತಿದ್ದರೂ ಜಾಣ ಮೌನ ವಹಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆ‌ಮಾಡಿಕೊಟ್ಟಿದೆ ಮಾತ್ರವಲ್ಲದೇ ಝಣ ಝಣ ಕಾಂಚಾಣದ ಮಹಿಮೆ ಇರಬಹುದೆ ಎನ್ನುವುದನ್ನು ರಾಮಲಿಂಗೇಶ್ವರನೆ ನೋಡಬೇಕಾಗಿದೆ.

ಬಹಳಷ್ಟು ವರ್ಷಗಳಿಂದ ಅಧಿಕಾರಿಗಳು, ಸಿಬ್ಬಂದಿಗಳು ಒಂದೇ ಕಡೆ ಬೀಡು ಬಿಟ್ಟರೆ, ಏನಾಗಬಹುದು ಎನ್ನುವುದಕ್ಕೆ ರಾಮನಗರದಲ್ಲಿ ನಡೆಯುತ್ತಿರುವ ವಿದ್ಯಾಮಾನವೇ ಉತ್ತಮ ಉದಾಹರಣೆಯಾಗಬಹುದು. ರಾಜ್ಯದಲ್ಲೇ ವರ್ಚಸ್ವಿ ನಾಯಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಆರ್.ವಿ.ದೇಶಪಾಂಡೆಯವರು ಪ್ರತಿನಿಧಿಸುವ ಕ್ಷೇತ್ರದ ಹೆಸರಿಗೆ ಕಳಂಕ ತರಲು ಹೊರಟಿರುವ ಇಂತಹ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿದಾಗ ಮಾತ್ರ ಗೂಡಂಗಡಿಗಳು ತಲೆ ಎತ್ತುವುದು ಕಡಿಮೆಯಾಗಬಹುದು, ಅತಿಕ್ರಮಣಕ್ಕೂ ಕಡಿವಾಣ ಹಾಕಬಹುದು. ಇಲ್ಲದೆ ಹೋದಲ್ಲಿ ರಾವಣರ ಸಂತತಿ ಬೆಳೆಯಬಹುದು.ಅದೇ ರೀತಿ ಗಣೇಶಗುಡಿ ಪ್ರದೇಶ ವ್ಯಾಪ್ತಿಯಲ್ಲಿಯೂ ನಡೆಯುತ್ತಿರುವ ಜಟ್ಟಿ ಅರ್ಥತ್ ಶಾರ್ಟ್ ರ್ಯಾಪ್ಟಿಂಗ್ ಸೇರಿದಂತೆ ಜಲ ಸಾಹಸ ಚಟುವಟಿಕೆಗಳ ದಾಖಲಾತಿಗಳ ಬಗ್ಗೆಯೂ ತಾಲೂಕಾಡಳಿತ, ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಇಲಾಖೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಇಲ್ಲವಾದಲ್ಲಿ ನಾ ಮುಂದೆ, ನೀ ಮುಂದೆ ಎಂದು ಮತ್ತೊಂದು ದುರ್ಘಟನೆ ನಡೆದರೂ ಅಚ್ಚರಿಪಡಬೇಕಿಲ್ಲ.

ಅಂಥೋನಿ ಜಾನ್ – ಸುಪಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ.
ನಮ್ಮ ಪೂರ್ವಜರು ಮರಗಿಡಗಳನ್ನು ನೆಟ್ಟು ನಮಗೆ ನೆರಳು ನೀಡಿದ್ದಾರೆ, ಆದರೆ ಜೀವಂತ ಮರಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ ಕಳ್ಳರಿಗೆ ಶಿಕ್ಷೆ ಆಗಬೇಕು, ಈ ಬಗ್ಗೆ ಕಂದಾಯ ಇಲಾಕೆ ಅಧಿಕಾರಿಗಳು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು.